Meerat: ಉತ್ತರಪ್ರದೇಶದ ಮೀರತ್‌ನಲ್ಲಿನ 44ನೇ ಬೆಟಾಲಿಯನ್ ಸಶಸ್ತ್ರ ಪೊಲೀಸ್ ಪಡೆಯ ಪೇದೆಯೊಬ್ಬರು ತಮಗೆ ರಾತ್ರಿ ನಿದ್ದೆ ಬಂದಾಗ ಕನಸಿನಲ್ಲಿ ಪತ್ನಿಯು ಕಾಣಿಸಿಕೊಂಡು ರಕ್ತ ಕುಡಿಯುತ್ತಾಳೆ ಹಾಗಾಗಿ ನನ್ನ ನೆಮ್ಮದಿ ಹೋಗಿದ್ದು, ಸರಿಯಾಗಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಆಗುತ್ತಿಲ್ಲ ಎನ್ನುವ ಕಾರಣ ನೀಡಿರುವ ಘಟನೆ ನಡೆದಿದೆ.
ಇದೊಂದು ವಿಚಿತ್ರ ಕಥೆ ಎನಿಸಿದರೂ ಪೇದೆ ಸಚಿಂದ್ರ ಪಟೇಲ್ ಅವರು ತಮಗೆ ಪತ್ನಿಯು ಕನಸಿನಲ್ಲಿ ಬೆದರಿಸುತ್ತಿರುವ ಅನುಭವವನ್ನು ಪತ್ರದಲ್ಲಿ ಬರೆದು ಉನ್ನತ ಅಧಿಕಾರಿಗಳಿಗೆ ನೀಡಿದ್ದಾರೆ. ಬೆಟಾಲಿಯನ್ ಉಸ್ತುವಾರಿ ದಳನಾಯಕ್ ಮಧುಸೂದನ್ ಶರ್ಮಾ ಅವರು ಫೆ.17 ರಂದು ಪೇದೆ ಪಟೇಲ್ ಅವರಿಗೆ ಕರ್ತವ್ಯದಲ್ಲಿ ನಿರ್ಲಕ್ಷ್ಯದ ಆರೋಪಕ್ಕೆ ಕಾರಣ ನೀಡಲು ನೋಟಿಸ್ ನೀಡಿದ್ದರು. ಇದಕ್ಕೆ ಪತ್ನಿಯ ರೌದ್ರಾವತಾರವನ್ನು ಪಟೇಲ್ ಪ್ರತಿಕ್ರಿಯೆಯಾಗಿ ನೀಡಿರುವ ಘಟನೆ ನಡೆದಿದೆ.
ಅಲ್ಲದೇ ನಿದ್ರಾಹೀನತೆಯಿಂದ ಜೀವನ ಸಾಕಾಗಿದೆ. ದೇವರ ಚರಣ ಸೇರುವ ಇಚ್ಛೆ ಹೆಚ್ಚಾಗಿದೆ ಎಂದು ಪಟೇಲ್ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಟೇಲ್ ಹೇಳಿಕೆಯ ಕುರಿತು ತನಿಖೆ ನಡೆಯುತ್ತಿದೆ.
