Kodagu: ಪೊನ್ನಂಪೇಟೆಯಲ್ಲಿ ಒಂಟಿ ಮಹಿಳೆಯೋರ್ವರು ಮನೆಯ ಕಾಂಪೌಂಡ್ ಒಳಗಿದ್ದ ವಾಹನವನ್ನು ಹೊರಗೆ ತೆಗೆಯುತ್ತಿದ್ದ ವೇಳೆ ವಾಹನದ ಹ್ಯಾಂಡ್ ಬ್ರೇಕ್ ಹಾಕದೇ ಕೆಳಗೆ ಇಳಿಯುವಾಗ ಪಕ್ಕದಲ್ಲಿದ್ದ ಕಾಂಪೌಂಡ್‌ಗೆ ಗುದ್ದಿದ್ದು, ಈ ಸಂದರ್ಭದಲ್ಲಿ ಮಹಿಳೆ ಕಾಂಪೌಂಡ್ ಹಾಗೂ ಜೀಪ್ ನಡುವೆ ಸಿಲುಕಿ ಪ್ರಾಣ ಬಿಟ್ಟ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ದುರ್ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿಯಲ್ಲಿ ಬುಧವಾರ ನಡೆದಿದೆ.
ಮನೆಯ ಕಾಂಪೌಂಡ್ ಒಳಗಿದ್ದ ಗೂಡ್ಸ್ ವಾಹನವನ್ನು ಹೊರಗೆ ತೆಗೆಯುತ್ತಿದ್ದ ವೇಳೆ ವಾಹನದ ಹ್ಯಾಂಡ್ ಬ್ರೇಕ್ ಹಾಕದೇ ಕೆಳಗೆ ಇಳಿದು ಗೇಟ್ ತೆಗೆಯುವುದಕ್ಕೆ ಹೋಗಲು ಮುಂದಾಗಿದ್ದು, ಇಳಿಜಾರಿನಲ್ಲಿದ್ದ ವಾಹನ ಮಹಿಳೆ ಒಂದು ಕಾಲನ್ನು ಕೆಳಗೆ ಇಡುತ್ತಲೇ ಜಾರಿಕೊಂಡು ಮುಂದಕ್ಕೆ ಹೋಗಿದೆ. ಆಗ ಮಹಿಳೆಗೆ ಇಳಿಯಲೂ ಆಗದೇ, ವಾಹನ ಒಳಗೆ ಹೋಗಲೂ ಆಗದೇ ಡೋರಿನಲ್ಲಿ ಸಿಲುಇ ಗೂಡ್ಸ್ ವಾಹನ ಮುಂದೆ ಇದ್ದ ಗೋಡೆಗೆ ಡಿಕ್ಕಿ ಹೊಡೆದಿದೆ. ಮಹಿಳೆ ಕಾಂಪೌಂಡ್ ಹಾಗೂ ವಾಹನದ ನಡುವೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.
ಮೃತ ಮಹಿಳೆಯನ್ನು ರಶ್ಮಿ (46) ಎಂದು ಗುರುತಿಸಲಾಗಿದೆ. ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮಹಿಳೆ ಸಹಾಯಕ್ಕೆಂದು ಕೂಗಿದರೂ ಯಾರೂ ಬಂದಿಲ್ಲ. ಕಾರಣ ಎತ್ತರದ ಕಾಂಪೌಂಡ್ ಹಾಗೂ ಸೆಕ್ಯೂರಿಟಿ ಸಿಸ್ಟಮ್ ಇರುವ ಗೇಟ್ ಇರುವುದರಿಂದ ಮಹಿಳೆ ಅಪಘಾತಕ್ಕೆ ಸಿಲುಕಿರುವುದು ಯಾರ ಗಮನಕ್ಕೂ ಬಂದಿಲ್ಲ.
ರಶ್ಮಿ ಅವರ ಗಂಡ ಮಧು ಮೋಟಯ್ಯ ಅವರು ಕೆಲಸದ ನಿಮಿತ್ತ ಗೋಣಿಕೊಪ್ಪಲಿಗೆ ಹೋಗಿದ್ದರು. ಈ ಘಟನೆ ನಡೆದು ಎಷ್ಟೋ ಸಮಯದ ಬಳಿಕ ಪತಿ ಮನೆಗೆ ಬದಾಗ ಪ್ರಕರಣ ಬೆಳಕಿಗೆ ಬಂದಿದೆ.
