Ramanagara : ನಮ್ಮ ಕಾನೂನು ನ್ಯಾಯಾಧೀಶರು ಕೇವಲ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸದೆ, ಸಂತ್ರಸ್ತರ ಬಳಿಗೆ ತೆರಳಿ ಅವರ ನೋವು, ನಿರಾಸೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳುತ್ತದೆ. ಇದೀಗ ಇಂಥದ್ದೇ ಒಂದು ಪ್ರಕರಣ ನಡೆದಿದ್ದು ನ್ಯಾಯಾಧೀಶರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು. ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಎಚ್. ಅವಿನಾಶ್ ಚಿಂದು ಎಂಬ ನ್ಯಾಯಾಧೀಶರು ಅಪಘಾತವೊಂದರಲ್ಲಿ ಪೆಟ್ಟಾದ ಕಾರಣ ಕಾಲು ನೋವಿನಿಂದಾಗಿ ಮೆಟ್ಟಿಲು ಹತ್ತಲಾಗದೆ ಕೋರ್ಟ್‌ನ ಹೊರಗೆ ಕುಳಿತಿದ್ದ ಮಹಿಳೆಯೊಬ್ಬರಿದ್ದಲ್ಲಿಗೆ ತಾವೇ ಸ್ವತಹ ಬಂದು ಬಂದು ವಿಚಾರಣೆ ನಡೆಸಿ ಮಾನವೀಯತೆ ಮೆರೆದಿದ್ದಾರೆ.
ಅಂದಹಾಗೆ ನಗರದ ಚಲುವಯ್ಯ ಎಂಬುವರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅವರ ಹತ್ತು ಮಕ್ಕಳಿಗೆ ಪರಿಹಾರ ನೀಡುವಂತೆ ಆದೇಶಿಸಿತ್ತು. ಮಕ್ಕಳ ಪರ ವಕೀಲರು ದಾಖಲೆಗಳನ್ನು ಸಲ್ಲಿಸಿದ ನಂತರ, ನ್ಯಾಯಾಧೀಶರು ಪರಿಹಾರ ನೀಡಲು ಆದೇಶಿಸಿದರು. ಈ ಸಂದರ್ಭದಲ್ಲಿ, ಚಲುವಯ್ಯನವರ ಪುತ್ರಿ ಯಶೋಧಮ್ಮಗೆ ಕಾಲು ಪೆಟ್ಟಾಗಿದ್ದು, ನೋವಿನಿಂದಾಗಿ ಕೋರ್ಟ್ ಒಳಗೆ ಬರಲು ಸಾಧ್ಯವಾಗಿರಲಿಲ್ಲ. ಆಕೆ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದರು. ಯಶೋಧಮ್ಮಗೆ ಕೋರ್ಟ್ ಒಳಗೆ ಬರಲು ಸಾಧ್ಯವಾಗದ ಕಾರಣ ನ್ಯಾಯಾಧೀಶರು ಆಕೆಯಿದ್ದಲ್ಲಿಗೆ ಬಂದು ವಿಚಾರಣೆ ನಡೆಸಿ, ಮೃತರ ವಾರಸುದಾರರಿಗೆ ₹1 ಲಕ್ಷ ಪರಿಹಾರ ಬಿಡುಗಡೆಗೆ ಆದೇಶಿಸಿದರು. ಜೂನ್ 29ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Kodagu: ಕೊಡಗು:ಹಾರಂಗಿ ಜಲಾಶಯದ ನೀರಿನ ಮಟ್ಟ!
