Mangalore: ರಂಗೋತ್ಸವ ಎಂಬ ಮನರಂಜನಾ ಕಾರ್ಯಕ್ರಮದ ಪಟ್ಟಿಯಲ್ಲಿ ಕರಾವಳಿಯ ದೈವರಾಧನೆಯನ್ನು ರಾಜ್ಯ ಸರಕಾರ
ಸೇರಿಸಿರುವ ಘಟನೆಯೊಂದು ನಡೆದಿದೆ. ನಾಡಿನ ವಿಭಿನ್ನ ಕಲೆ ಸಂಸ್ಕೃತಿಗಳನ್ನು ಪರಿಚಯಿಸುವ ʼರಂಗೋತ್ಸವʼ ಕಾರ್ಯಕ್ರಮದಲ್ಲಿ ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ವಸ್ತುವಲ್ಲ ಎಂದು ಸರಕಾರದ ವಿರುದ್ಧ ದೈವರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲೆಂದರಲ್ಲಿ ದೈವದ ವೇಷಭೂಷಣ ಹಾಕಿ ಪ್ರದರ್ಶನ ಮಾಡಬಾರದು ಎನ್ನುವುದರ ಕುರಿತು ಕ್ರಮ ಕೈಗೊಳ್ಳಬೇಕೆಂದು ದೈವಾರಾಧಕರು ಆಡಳಿತ ವ್ಯವಸ್ಥೆಗೆ ಒತ್ತಾಯ ಮಾಡಿಕೊಂಡು ಬರ್ತಾನೆ ಇದ್ದಾರೆ. ಆದರೆ ಇದೀಗ ಕಾಂಗ್ರೆಸ್ ಸರಕಾರ ದೈವರಾಧನೆಗೆ ಅಪಚಾರ ಮಾಡಿದೆ ಎಂದು ದೈವರಾಧಕರು ಆರೋಪ ಮಾಡಿದ್ದಾರೆ.
ನಾಡಿನ ಸಾಂಸ್ಕೃತಿಕ ವೈವಿಧ್ಯತೆಯ ಅರಿವು ಮೂಡಿಸಲು ಶಾಲೆಗಳಲ್ಲಿ ರಂಗೋತ್ಸವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಕುರಿತು ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ. ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಬೊಂಬೆಯಾಟ ಜೊತೆಗೆ ದೈವಾರಾಧನೆ ಸೇರ್ಪಡೆ ಮಾಡಲಾಗಿದೆ. ಇದು ದೈವಾರಾಧಕರನ್ನು ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.
ಸಮಸ್ತ ತುಳುನಾಡಿನ ಜನರ ನಂಬಿಕೆಗೆ ಧಕ್ಕೆಯಾಗಿದೆ. ಈ ಸುತ್ತೋಲೆಯನ್ನು ವಾಪಾಸು ಪಡೆಯಲು ಒತ್ತಾಯ ಹೆಚ್ಚಾಗಿದೆ. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ ಕಳೆದ ಬಾರಿ ಕೂಡಾ ರಂಗೋತ್ಸವ ಕಾರ್ಯಕ್ರಮದಲ್ಲಿಯೂ ದೈವಾರಾಧನೆಯನ್ನು ಸೇರಿಸಲಾಗಿತ್ತು. ಆದರೆ ನಂತರ ಮಾಜಿ ಸಚಿವ ಸುನೀಲ್ ಕುಮಾರ್ ಮನವಿ ಮೇರೆಗೆ ಕೈ ಬಿಡಲಾಗಿತ್ತು. ಈಗ ಅದೇ ರೀತಿ ವಾಪಾಸು ಸೇರಿಸಲಾಗಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಈ ಕುರಿತು ಪತ್ರ ಬರೆದಿದ್ದಾರೆ. ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ವಸ್ತುವಲ್ಲ. ಕಾಂಗ್ರೆಸ್ ಸರಕಾರಕ್ಕೆ ಕನಿಷ್ಠ ಜ್ಞಾನವೂ ಇಲ್ಲವೇ? ಇದು ಬೇಜವಾಬ್ದಾರಿ ನಡೆ. ತುಳುನಾಡಿನ ದೈವಭಕ್ತರುಗಳ ನಂಬಿಕೆಗೆ ಧಕ್ಕೆಯಾಗಿದೆ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ.
