Bengaluru Stampede: ಬೆಂಗಳೂರಿನ ಕಾಲ್ತುಳಿತ ಪ್ರಕರಣ ನಡೆದು ಎರಡನೇ ದಿನವಾದರೂ ಇನ್ನು ವಿಮರ್ಶೆಗಳು ನಡೆಯುತ್ತಲೇ ಇದೆ. ಅತ್ತ ಸಾವನ್ನಪ್ಪಿದ ಅಭಿಮಾನಿಗಳ ಮನೆಯಲ್ಲಿ ದುಖಃ ಮಡುಗಟ್ಟಿದ್ದರೆ ಇತ್ತ ರಾಜಕಾರಣಿಗಳು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಚಾಟಿ ಬೀಸುತ್ತಿದ್ದಾರೆ. ಪೊಲೀಸ್ ಇಲಾಖೆ ಜತೆ ಸಭೆ ನಡೆಸಿ ಸರ್ಕಾರ ಈ ಕಾರ್ಯಕ್ರಮ ಮಾಡಿಲ್ಲ, ಯಾರ ಅನುಮತಿ ತಗೊಂಡಿಲ್ಲ, ನಿಮ್ಮ ನಿಮ್ಮ ಮಕ್ಕಳಿಗಾಗಿ ಈ ಕಾರ್ಯಕ್ರಮ ಮಾಡಿದ್ರಿ, ನಿಮ್ಮ ಹಾರಾಟಕ್ಕಾಗಿ 11 ಸಾವಾಯ್ತು, ನೀವ್ಯಾಕೆ ನೈತಿಕ ಹೊಣೆ ಹೊತ್ತಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಗಳೂರಿನಲ್ಲಿ ಪ್ರಶ್ನಿಸಿದ್ದಾರೆ.
ಈ ಸರ್ಕಾರ ಪೊಲೀಸರನ್ನು ಎಲ್ಲ ರೀತಿಯಲ್ಲಿ ಸಂಕಷ್ಟಕ್ಕೆ ಸಿಕ್ಕಿಸಿದೆ. ಪೊಲೀಸರನ್ನು ಈ ಸರ್ಕಾರ ಟಾರ್ಗೆಟ್ ಮಾಡಿದೆ. ಸಿದ್ದರಾಮಯ್ಯ ನೈತಿಕತೆ ಹೊಣೆ ಹೊರಬೇಕು. ಅದು ಬಿಟ್ಟು ಪೊಲೀಸರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡಿದ್ದಾರೆ. ನಿನ್ನೆ ಕ್ಯಾಬಿನೆಟ್ ಸಭೆಯಲ್ಲಿ ಇಡೀ ಕರ್ನಾಟಕ ಆಘಾತ ಆಗುವ ನಿರ್ಧಾರ ತಗೊಂಡಿದ್ದಾರೆ. ದಯಾನಂದ್, ಶೇಖರ್ ಅವ್ರು ಸೇರಿ ಐವರನ್ನು ಅಮಾನತು ಮಾಡಿದ್ದಾರೆ. ಸಿಎಂ, ಡಿಸಿಎಂ ಅಥವಾ ಗೃಹ ಸಚಿವ ಅಥವಾ ಯಾವುದೇ ಸಚಿವರು ನೈತಿಕ ಹೊಣೆ ಹೊತ್ತಿಲ್ಲ. ಇದು ನಾಚಿಗೇಡಿನ ಕೆಲ ಎಂದು ಹೇಳಿದ್ದಾರೆ.
ಡಿಕೆಶಿ ಅವರು ಅತ್ತಿದ್ದು ನೋಡಿದೆ, ಕುಮಾರಣ್ಣ ಅತ್ರೆ ಅದು ನಾಟಕನಾ? ಡಿಕೆಶಿ ಅತ್ತರೆ ಅದು ಅಂತರಾಳದಿಂದ ಬಂದಿದ್ದಾ? ಪೊಲೀಸರಿಗೆ ಕನಿಷ್ಠ ಮೆಚ್ಚುಗೆ ಕೊಟ್ಟಿಲ್ಲ, ದಯಾನಂದ್ ಮೋಸ್ಟ್ ಫೈನೆಸ್ಟ್ ಅಧಿಕಾರಿ, ಮೈಸೂರಲ್ಲಿ ದಸರಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹೋದ ಕಡೆ ಎಲ್ಲ ಪ್ರಾಮಾಣಿಕತೆ, ದಕ್ಷತೆ ತೋರಿಸಿದ್ದಾರೆ. ಅಂಥ ಅಧಿಕಾರಿಯನ್ನ ಬಲಿಪಶು ಮಾಡಿದ್ದೀರಲ್ಲ? ಅವರ ಅವಧಿಯಲ್ಲಿ ಸಣ್ಣ ಲೋಪ ಆಗಿಲ್ಲ, ನಿಮ್ಮ ಎಲ್ಲ ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಸಿಕೊಟ್ಟಿದ್ದಾರೆ. ಆರ್‌ಸಿಬಿ ಒತ್ತಡಕ್ಕೆ ಸರ್ಕಾರ ಒಳಗಾಗಿದೆ. ಇಷ್ಟು ವರ್ಷ ಬೆಂಗಳೂರಿನಲ್ಲಿ ಮ್ಯಾಚ್ ಗಳು ನಡೆದಿವೆ, ಎಫಿಷಿಯೆಂಟ್ ಆಗಿ ನಿರ್ವಹಣೆ ಮಾಡಿಲ್ವಾ ಪೊಲೀಸರು? ಒಬ್ಬ ಕಮೀಷನರ್ ಅಮಾನತು ಮಾಡ್ತೀರ ಅಂದ್ರೆ ಇಲಾಖೆ ಆತ್ಮವಿಶ್ವಾಸ ಕುಂದಿಸಲ್ವಾ?
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಮ್ಯಾಚ್ ಆದ ದಿನ ರಾತ್ರಿಯೆಲ್ಲ ಅಭಿಮಾನಿಗಳು ಬೆಂಗಳೂರಿನಲ್ಲಿ ಇದ್ರು, ರಾತ್ರಿ ಎಲ್ಲಾ ಪೊಲೀಸರು ಇಡೀ ನಗರದಲ್ಲಿ ಸುವ್ಯವಸ್ಥೆ ಕಾಪಾಡಿದ್ರು ಅವರಿಗೆ ಸರ್ಕಾರ ಮೆಚ್ಚುಗೆ ಸೂಚಿಸಬೇಕಿತ್ತು. ಆ ರಾತ್ರಿ ಯಾವುದೇ ಅವಘಡ ಆಗದೇ ಪೊಲೀಸರು ನಿಯಂತ್ರಣ ಮಾಡಿದ್ದಾರೆ. ಬೆಳಗ್ಗೆ ನೀವು ಎದ್ದು ಟ್ವೀಟ್ ಮಾಡಿ ಬನ್ನಿ ಸೆಲೆಬ್ರೆಷನ್ ಇದೆ ಅಂತ ಓಪನ್ ಆಹ್ವಾನ ಮಾಡ್ತೀರಿ, ಪೊಲೀಸ್ ಕಮೀಷನರ್ ಜತೆ ಮಾತಾಡಿದ್ರಾ!? ಇದು ಇಂಟಲಿಜೆನ್ಸ್ ಫೇಲ್ಯೂರ್ ಅಲ್ವಾ!? ಯಾಕೆ ಇಂಟಲಿಜೆನ್ಸ್ ಮುಖ್ಯಸ್ಥರ ವಿರುದ್ಧ ಕ್ರಮ ತಗೊಂಡಿಲ್ಲ? ಎಂದು ಸಿಂಹ ಕಿಡಿ ಕಾರಿದ್ದಾರೆ.
