ಬೆಳ್ತಂಗಡಿ: ತಾಲೂಕಿನ ಗ್ರಾಮೀಣ ಭಾಗದ ದೇವಾಲಯವೊಂದರಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ವಿವಾಹ ನಡೆಸಿದ ಬಗ್ಗೆ ಸುದ್ದಿಯಾದ ಬೆನ್ನಲ್ಲೇ ಹಿಂದೂ ಸಂಘಟನೆಗಳು ಒಟ್ಟಾಗಿ ನ್ಯಾಯಕ್ಕೆ ಪೊಲೀಸರ ಮೊರೆ ಹೋದ ಬಳಿಕ ಕೆಲವು ಸಂಗತಿಗಳು ಹೊರಬಂದಿವೆ.
ತಾಲೂಕಿನ ನಡ ಎಂಬ ಗ್ರಾಮೀಣ ಭಾಗದಲ್ಲಿನ ಸತ್ಯನಾರಾಯಣ ದೇವಸ್ಥಾನದಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ವಿವಾಹವಾಗಿದ್ದರು. ಈ ವಿವಾಹ ಕಾರ್ಯ ನೆರವೇರಿಸಿ ಸಾಮರಸ್ಯ ಕದಡಿದ್ದಾರೆ ಎಂದು ದೇವಾಲಯದ ಅರ್ಚಕ ರಾಧಾಕೃಷ್ಣ ಹೊಳ್ಳ ಅವರ ಮೇಲೆ ಪೊಲೀಸರಿಗೆ ದೂರು ನೀಡಿ, ಆ ಬಳಿಕ ಹಿಂದೂ ಕಾರ್ಯಕರ್ತರು ಅರ್ಚಕರನ್ನು ಪ್ರಶ್ನೆ ಮಾಡಿದ್ದರು.
ಇಡೀ ತಾಲೂಕಿನಾದ್ಯಂತ ಸುದ್ದಿಯಾದ ಬೆನ್ನಲ್ಲೇ ಅರ್ಚಕ ಸ್ಪಷ್ಟನೆ ನೀಡಿದ್ದು, ಇಲ್ಲಿನ ಪ್ರಭಾವಿ ಹಿಂದೂ ಮುಖಂಡರಾದ ಭಾಸ್ಕರ ಧರ್ಮಸ್ಥಳ ಅವರ ಒತ್ತಾಯಕ್ಕೆ ಮಣಿದು,ಅದಲ್ಲದೆ ಹಣದ ಆಮಿಷವನ್ನು ಒಡ್ಡಿದ್ದು, ಇದಕ್ಕೆ ಮಣಿದು ಯಾವುದೇ ದಾಖಲೆಗಳನ್ನು ಪರಿಶೀಲಿಸದೇ ಈ ಮದುವೆ ಕಾರ್ಯ ನೆರವೇರಿಸಿದ್ದೇನೆ ಎಂದಿದ್ದಾರೆ ಎನ್ನಲಾಗಿದೆ. ಹಿಂದೂ ಯುವತಿಯನ್ನು ಮುಸ್ಲಿಂ ಗೆ ಕೊಟ್ಟು ಮದುವೆ ಮಾಡಿಸುವ ಕೆಲಸಕ್ಕೆ ಹಿಂದೂ ನಾಯಕರೇ ಕೈಹಾಕಿದ್ದಾರೆ ಎಂದು ತಿಳಿಯುತ್ತಲೇ ಪ್ರಜ್ಞಾವಂತ ಕಾರ್ಯಕರ್ತರ ಕೆಂಗಣ್ಣು ಭಾಸ್ಕರ್ ಧರ್ಮಸ್ಥಳ ಅವರ ಮೇಲೆ ಬಿದ್ದಿದೆ.
ಕೂಡಲೇ ಭಾಸ್ಕರ್ ಧರ್ಮಸ್ಥಳ ಅವರನ್ನು ಸಂಪರ್ಕಿಸಿದ ಕೆಲ ಹೆಸರು ಹೇಳಲು ಇಚ್ಛಿಸದ ಹಿಂದೂ ಯುವಕರು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದಲ್ಲದೆ, ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗಿದೆ. ವಕೀಲರ ಮೂಲಕ ದೇವಾಲಯಕ್ಕೆ ತೆರಳಿದ ಜೋಡಿಯನ್ನು ಕಂಡ ಅರ್ಚಕರು ಭಾಸ್ಕರ್ ಧರ್ಮಸ್ಥಳ ಅವರ ಫೋನ್ ಕರೆಗೆ ಓಗೊಟ್ಟು ಮದುವೆ ನಡೆಸಿದ್ದಾರೆ ಎನ್ನುವುದು ಸತ್ಯವೋ ಸುಳ್ಳೋ ಎಂಬ ಬಗ್ಗೆಯೂ ತನಿಖೆ ಆಗಬೇಕಿದೆ.
ಇತ್ತ ಹಿಂದೂ ನಾಯಕನ ಮುತುವರ್ಜಿಯಲ್ಲಿ ಮುಸ್ಲಿಂ ಯುವಕನೊಬ್ಬ ರಾಜಾರೋಷವಾಗಿ ಹಿಂದೂ ಯುವತಿಯನ್ನು ಮದುವೆಯಾದ ಸುದ್ದಿ ತಿಳಿದ ಬೆಳ್ತಂಗಡಿ ತಾಲೂಕಿನ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರ ಜಿಲ್ಲೆಯ ಅನ್ಯಧರ್ಮದ ಜೋಡಿಯನ್ನು ಈ ಜಿಲ್ಲೆಗೆ ಕರೆತಂದು ಮದುವೆ ಮಾಡಿಸುವ ಅಗತ್ಯ ಏನಿತ್ತು? ಶಾಂತಿ ಕಾಪಾಡಿಕೊಂಡು ಬಂದಿರುವ ಬೆಳ್ತಂಗಡಿಯಲ್ಲಿ ಅಶಾಂತಿ ಸೃಷ್ಟಿಸಲು ಹಿಂದೂ ನಾಯಕರೇ ಪ್ರಯತ್ನಿಸುತ್ತಿದ್ದಾರೆಯೇ? ಹಾಗೂ ಈ ಪ್ರಕರಣದಲ್ಲಿ ಭಾಸ್ಕರ್ ಧರ್ಮಸ್ಥಳ ಹಾಗೂ ಸಂದೀಪ್ ಹಾಗೂ ಇನ್ನಿತರ ಕೆಲವರ ಹೆಸರು ಪೊಲೀಸರಿಗೆ ಕೊಟ್ಟ ದೂರಿನ ಪ್ರತಿಯಲ್ಲಿದ್ದು ಪ್ರಕರಣ ಯಾವ ಹಂತ ತಲುಪಲಿದೆ ಎಂಬುವುದನ್ನು ಕಾದುನೋಡಬೇಕಿದೆ.
