ಕೊರೋನಾ ಸೋಂಕಿನ ಪ್ರಭಾವದಿಂದ ಈ ವರ್ಷ ಡೆಂಗ್ಯೂ ಪ್ರಕರಣಗಳು ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದಿದೆ. ರಾಜ್ಯದಲ್ಲಿ ಕಳೆದ ಎಂಟು ತಿಂಗಳಲ್ಲಿ 2,139 ಮಂದಿಯಲ್ಲಿ ಡೆಂಗ್ಯೂ ಹಾಗೂ 733 ಮಂದಿ ಚಿಕುನ್ಗುನ್ಯಾ ಕಾಣಿಸಿಕೊಂಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗ್ಯೂ ಪ್ರಕರಣಗಳು ಕಡಿಮೆಯಾಗಿವೆ. ವೈರಸ್ ಆತಂಕದ ನಡುವೆ ಮುಂಗಾರಿನ ಹಿನ್ನೆಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ತೀವ್ರಗೊಳ್ಳಲಿದ್ದು ಡೆಂಗ್ಯೂ, ಮಲೇರಿಯಾ ಬಗ್ಗೆ ಎಚ್ಚರ ವಹಿಸುವಂತೆ ಹಾಗೂ ಮನೆಗಳ ಸುತ್ತಮುತ್ತಲು ಸೊಳ್ಳೆಗಳ ನಿಯಂತ್ರಣ ಮಾಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಡೆಂಗ್ಯೂ ಹಾಗೂ ಚಿಕುನ್ಗುನ್ಯಾ ಹರಡಲು ಕಾರಣವಾಗುವ ಸೊಳ್ಳೆಯೇ ಝೀಕಾ ವೈರಸ್ ಹರಡಲೂ ಕಾರಣವಾಗುತ್ತದೆ. ಹೀಗಾಗಿ ಈಗಾಗಲೇ ನೆರೆಯ ಜಿಲ್ಲೆಯಲ್ಲಿ ಹರಡಿರುವ ಝೀಕಾ ವೈರಸ್ ಹರಡದಂತೆಯೂ ಎಚ್ಚರ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು, ಉಡುಪಿಯಲ್ಲೇ ಅಧಿಕ:
ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಪ್ರಕರಣ ಕಳೆದ ಒಂದು ತಿಂಗಳಲ್ಲಿ ಡೆಂಗ್ಯೂ ಪ್ರಕರಣ ವರದಿಯಾಗಿದ್ದು, ಈ ಪೈಕಿ ಶೇ.31ರಷ್ಟು ಪ್ರಕರಣ ಉಡುಪಿ, ಬೆಂಗಳೂರು ನಗರದಲ್ಲೇ ವರದಿಯಾಗಿವೆ. ಕಳೆದ ಕೆಲವು ವಾರಗಳಿಂದ ಆಸ್ಪತ್ರೆಗಳಿಗೆ ಡೆಂಗ್ಯೂ ಕಾರಣದಿಂದ ದಾಖಲಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಕೇರಳ ಹೆಚ್ಚು ಡೆಂಗ್ಯೂ ಪೀಡಿತ ರಾಜ್ಯಗಳಾದರೆ ಬೆಂಗಳೂರು 349, ದಕ್ಷಿಣ ಕನ್ನಡ 291, ಶಿವಮೊಗ್ಗ 180, ಹಾಸನ 168 ಹಾಗೂ ಕಲಬುರಗಿ 135 ಡೆಂಗ್ಯೂ ಕಾಣಿಸಿಕೊಂಡ ಜಿಲ್ಲೆಗಳಾಗಿವೆ.
ಡೆಂಗ್ಯೂ ರೋಗದ ಲಕ್ಷಣಗಳೇನು?
ಡೆಂಗ್ಯೂನಲ್ಲಿ ಹೆಮರಾಜಿಕ್, ಸಾಫ್ಟ್ ಸಿಂಡ್ರೋಮ್ ಸೇರಿದಂತೆ 4 ವಿಧದ ವೈರಾಣುಗಳಿವೆ. ‘ವೈರಾಣು 1’ ಬಂದರೆ ಗುಣವಾಗುತ್ತದೆ. ಒಮ್ಮೆ ಡೆಂಗ್ಯೂ ಬಂದವರಿಗೆ ಮತ್ತೊಮೆ ‘ವೈರಾಣು 2 ಮತ್ತು 3’ ಬಂದರೆ ಅದರ ಪರಿಣಾಮ ತುಂಬಾ ಗಂಭೀರದ್ದಾಗಿರುತ್ತದೆ. ದಿಢೀರ್ ಜ್ವರ, ತಲೆನೋವು, ಮೂಗಿನಲ್ಲಿ ರಕ್ತ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ತೋಳು, ಮೈ-ಕೈ ನೋವು, ಅತಿಸಾರ ಇವು ಆರಂಭಿಕ ಲಕ್ಷಣಗಳು. ಇನ್ನು ಗಂಭೀರ ಹಂತ ತಲುಪಿದಾಗ ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ ಕರುಳಿನಲ್ಲಿ ರಕ್ತಸ್ರಾವವಾಗುತ್ತದೆ.
ಆತಂಕ ಬೇಡ, ಎಚ್ಚರ ವಹಿಸಿ:
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಡೆಂಗ್ಯೂ ಪ್ರಕರಣಗಳು ನಿಯಂತ್ರಣದಲ್ಲಿವೆ. ಕಳೆದ ವರ್ಷ ಬರೋಬ್ಬರಿ 3 ಸಾವಿರಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ಉಂಟಾಗಿತ್ತು. ಈ ಬಾರಿ 2 ಸಾವಿರಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ಕಾಣಿಸಿಕೊಂಡಿದೆ. ಮಳೆಗಾಲದಲ್ಲಿ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಎಲ್ಲಾ ಮುನ್ನೆಚ್ಚೆರಿಕೆ ತೆಗೆದುಕೊಳ್ಳಬೇಕು. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು.
