ಗುಜರಾತ್ ಚುನಾವಣೆಯಲ್ಲಿ ಗೆದ್ದ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಜಡಿದಿದ್ದಾರೆ. ಈ 40 ಮಂದಿಯಲ್ಲಿ ಸುಮಾರು 29 ಮಂದಿಯ ವಿರುದ್ಧ ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ. ಇನ್ನೂ ಈ ಮಾಹಿತಿಯನ್ನು ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ಮತ್ತು ‘ಗುಜರಾತ್ ಎಲೆಕ್ಷನ್ ವಾಚ್’ ನೀಡಿದೆ. ಮಾಹಿತಿಯು ನಾಯಕರು ಸಲ್ಲಿಸಿದ ಅಫಿಡವಿಟ್‌ಗಳ ಆಧಾರದ ಮೇಲೆ ಹಾಗೂ ಅವರ ವಿಶ್ಲೇಷಣೆಯಿಂದ ಈ ಡೇಟಾವು ಬೆಳಕಿಗೆ ಬಂದಿದೆ.
ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಡಿಸೆಂಬರ್ 8 ರಂದು ಪ್ರಕಟವಾಗಿದ್ದು, ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸತತವಾಗಿ 7ನೇ ಬಾರಿಗೆ ಗೆಲುವನ್ನು ಸಾಧಿಸಿದೆ. 182 ಸ್ಥಾನಗಳಲ್ಲಿ ಬಿಜೆಪಿ 156 ಸ್ಥಾನವನ್ನು ಗಳಿಸಿದ್ದು, ಕಾಂಗ್ರೆಸ್ 17 ಸ್ಥಾನಗಳನ್ನು ಮತ್ತು ಆಮ್ ಆದ್ಮಿ ಪಕ್ಷವು 5 ಸ್ಥಾನವನ್ನು ಪಡೆದುಕೊಂಡಿದೆ. ಇನ್ನೂ, ಗುಜರಾತ್‌ನ 156 ಬಿಜೆಪಿ ಶಾಸಕರ ಪೈಕಿ 26 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಎಡಿಆರ್ ವರದಿ ಮಾಡಿದೆ.
ಎಡಿಆರ್ ವರದಿಯ ಪ್ರಕಾರ, ಗುಜರಾತ್ ಚುನಾವಣೆಯಲ್ಲಿ ಗೆದ್ದ 182 ಹೊಸ ಶಾಸಕರಲ್ಲಿ 40 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 29 ಶಾಸಕರ ಪೈಕಿ 20 ಮಂದಿ ಭಾರತೀಯ ಜನತಾ ಪಕ್ಷದವರೇ ಆಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಪಟ್ಟಿಯಲ್ಲಿ, 9 ಕಾಂಗ್ರೆಸ್ ಶಾಸಕರು ಮತ್ತು 5 ರಲ್ಲಿ 2 ಆಮ್ ಆದ್ಮಿ ಪಕ್ಷದ ಶಾಸಕರು ಸೇರಿದ್ದಾರೆ. ಹಾಗೇ ಈ ಕ್ರಿಮಿನಲ್ ಪ್ರಕರಣದ ಪಟ್ಟಿಯಲ್ಲಿ ಇಬ್ಬರು ಸ್ವತಂತ್ರ ಶಾಸಕರು ಕೂಡ ಒಳಗೊಂಡಿದ್ದಾರೆ. ಗುಜರಾತ್‌ನಲ್ಲಿ ಸಮಾಜವಾದಿ ಪಕ್ಷ ಒಂದೇ ಒಂದು ಸ್ಥಾನವನ್ನು ಗೆದ್ದಿದ್ದು, ಈ ಗೆಲುವು ಪಡೆದ ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಇನ್ನೂ, 2017 ಕ್ಕೆ ಹೋಲಿಸಿದರೆ 2022 ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರ ಮೇಲಿನ ಕ್ರಿಮಿನಲ್ ಪ್ರಕರಣಗಳ ಸಂಖ್ಯೆಯು ಕಡಿಮೆಯಾಗಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 47 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆದರೆ ಈ ಬಾರಿ ಪ್ರಕರಣದ ಸಂಖ್ಯೆ 40ಕ್ಕೆ ಇಳಿದಿದೆ ಎಂದು ಎಡಿಆರ್ ವರದಿ ಮಾಡಿದೆ. ಶಾಸಕರ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದ ನಂತರ ಎಡಿಆರ್ ತನ್ನ ವರದಿಯನ್ನು ಸಿದ್ಧಗೊಳಿಸಿದೆ.
ಎಡಿಆರ್ ವರದಿ ಪ್ರಕಾರ, ಒಬ್ಬ ಬಿಜೆಪಿ ಮತ್ತು ಇಬ್ಬರು ಕಾಂಗ್ರೆಸ್ ಹೊಸ ಶಾಸಕರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಕಾಂಗ್ರೆಸ್ ಶಾಸಕರು ಅನಂತ್ ಪಟೇಲ್, ಕೀರ್ತಿ ಪಟೇಲ್ ಮತ್ತು ಉನಾದಿಂದ ಬಿಜೆಪಿಯ ಶಾಸಕ ಕಲುಭಾಯ್ ರಾಥೋಡ್ ಅವರು ಎಂದು ತಿಳಿದುಬಂದಿದೆ.
ಹಾಗೇ ನಾಲ್ವರು ಹೊಸ ಶಾಸಕರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬಿಜೆಪಿ ಶಾಸಕ ಜೇಥಾ ಭಾರವಾಡ್ ವಿರುದ್ಧ ಕೂಡ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಹಾಗೂ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, ಬಿಜೆಪಿ ಶಾಸಕ ಜನಕ್ ತಲವಿಯಾ ಮತ್ತು ಆಮ್ ಆದ್ಮಿ ಪಕ್ಷದ ಶಾಸಕ ಚೈತಾರ್ ವಾಸವ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
