Ballary : ಗಣಿ ನಾಡು ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದೆ. ಜನಾರ್ದನ ರೆಡ್ಡಿ ಮನೆಯ ಬಳಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಸಂಭವಿಸಿತ್ತು. ಈ ಸಂಘರ್ಷದ ನಡುವೆ ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ಈ ವಿಚಾರ ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು ಪಕ್ಷ ಹಾಗೂ ಪ್ರತಿಪಕ್ಷಗಳು ಕಿತ್ತಾಡಿಕೊಳ್ಳುತ್ತಿವೆ. ಇದೀಗ ಈ ವಿಚಾರವಾಗಿ ಜನಾರ್ದನ ರೆಡ್ಡಿ ಪರ ನಿಲ್ಲುವಂತೆ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ ಎನ್ನಲಾಗಿದೆ.
ಜನವರಿ 3 ರಂದು ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಹಿನ್ನೆಲೆ ಕಾರ್ಯಕ್ರಮದ ಶುಭಕೋರುವ ಬ್ಯಾನರ್ ಅಳವಡಿಸಲಾಗುತ್ತಿತ್ತು. ಈ ವೇಳೆ ಜನಾರ್ದನ ರೆಡ್ಡಿ ಮನೆಯ ಬಳಿಯೂ ಬ್ಯಾನರ್ ಅಳವಡಿಕೆ ಮಾಡಲು ಯತ್ನಿಸಿದ್ದಾರೆ. ಇದನ್ನ ಜನಾರ್ದನ ರೆಡ್ಡಿ ಬೆಂಬಲಿಗರು ವಿರೋಧಿಸಿದ್ದಾರೆ. ಈ ವೇಳೆ ಹವಂಬಾವಿ ಪ್ರದೇಶದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸದ ಸಮೀಪ ಜನವರಿ 1ರಂದು ಸಂಜೆ ಹೊತ್ತಿಗೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ರೆಡ್ಡಿಯವರ ನಿವಾಸದ ಮುಂದೆ ಬ್ಯಾನರ್ ಅಳವಡಿಕೆ ವಿಚಾರಕ್ಕೆ ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಈ ವೇಳೆ ಮಿಸ್ ಫೈರಿಂಗ್ ಆಗಿ ರಾಜಶೇಖರ್ ಎಂಬ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇದೀಗ ಈ ಒಂದು ಗಲಭೆ ರಾಜ್ಯಾದ್ಯಂತ ಕಿಚ್ಚನ್ನು ಹಚ್ಚುತ್ತಿರುವ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ನಡೆದಿರುವ ಗಲಭೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಸೂಚಿಸಿರುವ ಬಿಜೆಪಿ ದೆಹಲಿ ವರಿಷ್ಠರು, ಪಕ್ಷವು ಜನಾರ್ದನ ರೆಡ್ಡಿ ಪರವಾಗಿ ನಿಲ್ಲಬೇಕೆಂದು ಸೂಚಿಸಿದೆ.
ಕೇಂದ್ರ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಶಿಕಾರಿಪುರ ಪ್ರವಾಸದಲ್ಲಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಂಜೆ ಬಳ್ಳಾರಿಗೆ ತೆರಳುತ್ತಿದ್ದು, ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಅವರನ್ನು ಭೇಟಿಯಾಗಲಿದ್ದಾರೆ. ಈಗಾಗಲೇ ದೂರವಾಣಿ ಮೂಲಕ ಇಬ್ಬರ ಜೊತೆ ಮಾತುಕತೆ ನಡೆಸಿದ್ದು, ಯಾವುದೇ ಕಾರಣಕ್ಕೂ ಧೃತಿಗೆಡದೆ ಕಾನೂನು ಮೂಲಕವೇ ಎಲ್ಲವನ್ನು ಸಮರ್ಥವಾಗಿ ಎದುರಿಸಬೇಕೆಂದು ಸಲಹೆ ಮಾಡಿದ್ದಾರೆ.
