Home » ಬಿಜೆಪಿಗೆ ಬಿಸಿ ತುಪ್ಪವಾದ ದೇವಸ್ಥಾನ ತೆರವು ವಿಚಾರ | ಬಿಜೆಪಿ ನಾಯಕರನ್ನು,ಜನಪ್ರತಿನಿಧಿಗಳನ್ನು ಛಾಡಿಸುತ್ತಿದ್ದಾರೆ ಕಾರ್ಯಕರ್ತರು | ಸಂಘ ಹಾಗೂ ಪರಿವಾರ ಸಂಘಟನೆಗಳಿಂದಲೂ ಛೀಮಾರಿ

ಬಿಜೆಪಿಗೆ ಬಿಸಿ ತುಪ್ಪವಾದ ದೇವಸ್ಥಾನ ತೆರವು ವಿಚಾರ | ಬಿಜೆಪಿ ನಾಯಕರನ್ನು,ಜನಪ್ರತಿನಿಧಿಗಳನ್ನು ಛಾಡಿಸುತ್ತಿದ್ದಾರೆ ಕಾರ್ಯಕರ್ತರು | ಸಂಘ ಹಾಗೂ ಪರಿವಾರ ಸಂಘಟನೆಗಳಿಂದಲೂ ಛೀಮಾರಿ

by Praveen Chennavara
0 comments

ರಾಜ್ಯದಲ್ಲಿ ದೇವಸ್ಥಾನ ತೆರವು ವಿಚಾರ ರಾಜ್ಯ ಬಿಜೆಪಿ ಸರಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ದಾರೆ.ಜತೆಗೆ ಕೆಲ ಗ್ರಾ.ಪಂ.ಸದಸ್ಯರೂ ರಾಜಿನಾಮೆಗೆ ಮುಂದಾಗಿದ್ದಾರೆ.

ಈ ಬೆಳವಣಿಗೆಯಿಂದ ಕಾರ್ಯಕರ್ತರು ಬಿಜೆಪಿ ಜನಪ್ರತಿನಿಧಿಗಳನ್ನು ಹಾಗೂ ನಾಯಕರನ್ನು ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕವಾಗಿ ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಮೈಸೂರಿನ ಉಚ್ಚಗಣಿಯ ಮಹದೇವಮ್ಮ ದೇವಸ್ಥಾನ ತೆರವು ಪ್ರಕರಣದೊಂದಿಗೆ ಮೊದಲ ಆಡಳಿತಾತ್ಮಕ ಸವಾಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎದುರಾಗಿದೆ. ಒಂದೆಡೆ ಸ್ವಪಕ್ಷೀಯ ನಾಯಕರೇ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳು ಬಿಜೆಪಿಯ ಹಿಂದುತ್ವ ಅಜೆಂಡಾವನ್ನೇ ಪ್ರಶ್ನೆ ಮಾಡಿವೆ.

ಹೀಗಾಗಿ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯೊಂದಿಗೆ ಹೊಸ ಸಮಸ್ಯೆಯೂ ಬಿಜೆಪಿಗೆ ಎದುರಾದಂತಾಗಿದೆ. ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ಸ್ವಪಕ್ಷದಲ್ಲಿಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜೊತೆಗೆ ರಾಜ್ಯ ಸರ್ಕಾರ ಮಾಡಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿ ದೇವಸ್ಥಾನಗಳ ಸಂಖ್ಯೆಯೂ ದೊಡ್ಡದಿದೆ ಎನ್ನಲಾಗುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್‌ ಆದೇಶ ಪಾಲನೆ ಮಾಡುವುದರಿಂದ ಆಗುವ ಪರಿಣಾಮಗಳ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಚರ್ಚೆ ಶುರುವಾಗಿದೆ.

ಮೈಸೂರಿನ ಉಚ್ಚಗಣಿಯ ಮಹದೇವಮ್ಮ ದೇವಸ್ಥಾನ ತೆರವು ಪ್ರಕರಣವನ್ನು ಸಂಘ ಪರಿವಾರ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಖಡಕ್ ಸಂದೇಶವನ್ನು ಆರ್‌ಎಸ್‌ಎಸ್‌ ರವಾನಿಸಿದೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಹಿಂದಕ್ಕೆ ತೆಗೆದುಕೊಳ್ಳುವ ಆಶ್ವಾಸನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟಿದ್ದಾರೆ.

ಈ ವಿಚಾರ ದೊಡ್ಡದಾಗುವ ಮೊದಲು ಸೂಕ್ತಕ್ರಮ ಕೈಗೊಳ್ಳಿ ಎಂಬ ಸೂಚನೆ ಸಂಘಪರಿವಾರದಿಂದ ಸರ್ಕಾರಕ್ಕೆ ಹೋಗಿದೆ. ಹೀಗಾಗಿ ಸರ್ಕಾರ ಗುರುವಾರ ಮತ್ತೊಂದು ಆದೇಶ ಮಾಡಲಿದೆ ಎನ್ನಲಾಗಿದೆ.

ಸುಪ್ರೀಂಕೋರ್ಟ್‌ ಆದೇಶ ಪಾಲನೆಯೊಂದಿಗೆ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಸರ್ಕಾರ ಹಿಂದುತ್ವದ ಅಜೆಂಡಾದಿಂದ ದೂರ ಸರಿಯುತ್ತದೆ ಎಂಬ ಆರೋಪವನ್ನು ಈ ಹಿಂದೆಯೇ ಬಿಜೆಪಿಯ ಕಟ್ಟರ್ ಶಾಸಕರು ಮಾಡಿದ್ದರು. ಅದಾದ ಬಳಿಕ ನಾಯಕತ್ವ ಬದಲಾವಣೆ ಆಗಿತ್ತು. ನಂತರ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೊಸ ಸಚಿವ ಸಂಪುಟವೂ ಅಸ್ತಿತ್ವಕ್ಕೆ ಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಕೆಲವೇ ಕೆಲವು ಮಂದಿ ಮೂಲ ಬಿಜೆಪಿಗರಿಗೆ ಮಂತ್ರಿಸ್ಥಾನ ಸಿಕ್ಕಿದೆ. ಜೊತೆಗೆ ಈಗ ಬಿಜೆಪಿಯ ಮೂಲ ಮಂತ್ರ ಹಿಂದುತ್ವದ ಅಜೆಂಡಾಕ್ಕೆ ಪಟ್ಟು ಬೀಳುವಂತಹ ಆದೇಶವನ್ನು ರಾಜ್ಯ ಸರ್ಕಾರ ಮಾಡಿದೆ. ಹೀಗಾಗಿ ತತ್‌ಕ್ಷಣ ಆದೇಶವನ್ನು ಹಿಂದಕ್ಕೆ ಪಡೆದು, ಹೊಸ ಆದೇಶ ಹೊರಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ ಎನ್ನಲಾಗಿದೆ.

You may also like

Leave a Comment