Satish jarakiholi: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠಾಧಿಪತಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ವಿರುದ್ದ ಅಕ್ರಮ ಸಂಸಾರ ಹೊಂದಿರುವ ಗಂಭೀರ ಆರೋಪಗಳು ಕೇಳಿಬಂದಿದ್ದು, ಕುರಿತಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ(Satish jarakiholi)ಯವರು ಸ್ಪೋಟಕ ಹೇಳಿಕೆಯೊಂದನು ನೀಡಿದ್ದು, ಸ್ವಾಮೀಜಿ ಹಾಗೂ ಮಕ್ಕಳ DNA ಪರೀಕ್ಷೆ ಮಾಡಿಸೋಣ ಎಂದು ಹೇಳಿದ್ದಾರೆ.
ಹೌದು, ಅಕ್ರಮ ಸಂಸಾರ ಹೊಂದಿರುವ ಗಂಭೀರ ಆರೋಪ ಮೇಲಿಂದ ಮೇಲೆ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿಗಳ ಡಿಎನ್ ಎ(DNA) ಟೆಸ್ಟ್ ನಡೆಸಲು ಪೀಠದ ಟ್ರಸ್ಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬಂದಿದೆ. ಈ ಕುರಿತು ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದಲ್ಲಿ ಟ್ರಸ್ಟ್ ನ ಅಧ್ಯಕ್ಷರಾಗಿರುವ ಸಚಿವ ಸತೀಶ್ ಜಾರಕಿಹೊಳಿ ನಡೆದ ರಾಜ್ಯ ಮಟ್ಟದ ಮಹತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸ್ವಾಮೀಜಿ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯ ತೀವ್ರಗೊಂಡಿದ್ದರಿಂದ ರಾಜನಹಳ್ಳಿಯ ವಾಲ್ಮೀಕಿ ಪೀಠದಲ್ಲಿ ಟ್ರಸ್ಟ್ ಅಧ್ಯಕ್ಷ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಭಾನುವಾರ ಪೀಠದಲ್ಲಿ ರಾಜ್ಯಮಟ್ಟದ ಮಹತ್ವದ ಸಭೆಯನ್ನ ನಡೆಸಲಾಗಿದೆ. ಸಭೆಯಲ್ಲಿ ಸಮಾಜದ ಮುಖಂಡರು ಹಾಗೂ ಭಕ್ತರು ಕೂಡ ಭಾಗವಹಿಸಿದ್ದು, ಸ್ವಾಮೀಜಿಯ ಜೊತೆಗೆ ಕೂಲಂಕುಷ ಸಮಾಲೋಚನೆ ನಡೆಸಲಾಗಿದೆ.
ಸಭೆ ಬಳಿಕ ಮಾತನಾಡಿದ ಜಾರಕಿಹೊಳಿ ಅವರು ಇನ್ನೂ 3 ತಿಂಗಳಲ್ಲಿ ಸ್ವಾಮೀಜಿ ಹಾಗೂ ಆ ಮಕ್ಕಳ DNA ಪರೀಕ್ಷೆ ನಡೆಯಬೇಕು. ಆಗ ಎಲ್ಲವು ಸ್ಪಷ್ಟವಾಗಲಿದೆ. ಪೂಜ್ಯ ಪ್ರಸನ್ನಾನಂದ ಸ್ವಾಮೀಜಿಗಳು ಬಹಳ ಸ್ಪಷ್ಟವಾಗಿ ನಿಮ್ಮ ಅನುಮಾನಗಳಿಗೆ ಉತ್ತರ ನೀಡಿದ್ದಾರೆ. ಸ್ವಾಮೀಜಿ ಮದುವೆಯಾಗಿದ್ದಾರೆ ಎಂಬ ಆರೋಪದ ಬಗ್ಗೆ ಸ್ವಾಮೀಜಿ ಅಲ್ಲಗಳೆದಿದ್ದಾರೆ.ಅಲ್ಲದೆ ಆಸ್ತಿ ಪಾಸ್ತಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.
ಅಂದಹಾಗೆ ಈ ಕುರಿತಾಗಿ ಮಾತನಾಡಿದ ಪ್ರಸನ್ನಾನಂದ ಸ್ವಾಮೀಜಿ, ನನ್ನ ಮೇಲೆ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಯಾವುದೇ ಆರೋಪವನ್ನು ಸಾಕ್ಷ್ಯ ಸಹಿತ ಸಾಬೀತು ಮಾಡಿದರೆ ಸಮಾಜ ಹೇಳಿದಂತೆ ಕೇಳುತ್ತೇನೆ. ಮದುವೆಯಾಗಿ ಮಕ್ಕಳಿದ್ದಾರೆ ಎಂಬ ಆರೋಪ ಶುದ್ಧ ಸುಳ್ಳು. ಭಕ್ತರಿಗೆ ಸಂಶಯವಿದ್ದರೆ ಡಿಎನ್‌ಎ ಪರೀಕ್ಷೆಗೆ ಒಳಪಡಿಸಲು ಸಿದ್ಧವಾಗಿದ್ದೇನೆ ಎಂದು ಸವಾಲು ಹಾಕಿದ್ದಾರೆ.
ಯಾವ ಆಸ್ಪತ್ರೆಗೆ ಕರೆದರೂ ಬರುತ್ತೇನೆ:
ಮದುವೆ ಆಗಿದೆ, ಮಕ್ಕಳೂ ಇದ್ದಾರೆ ಎಂಬ ಆರೋಪ ಸುಳ್ಳು. ಈ ಬಗ್ಗೆ ಭಕ್ತರಿಗೆ ಸಂಶಯವಿದ್ದರೆ ಡಿಎನ್‌ಎ ಪರೀಕ್ಷೆಗೆ ಒಳಪಡಲು ನಾವು ಸಿದ್ಧರಿದ್ದೇವೆ. ಯಾರೇ ಕರೆದರೂ ಯಾವ ಆಸ್ಪತ್ರೆಗೆ ಕರೆದರೂ ಬರುತ್ತೇನೆ. ವಾಲ್ಮೀಕಿ ಜಾತ್ರೆಗೆ ಧರ್ಮಗುರುಗಳನ್ನು ಆಹ್ವಾನಿಸುವಾಗ ಕೆಲವರು ಸಂಸಾರಸ್ಥ ಸ್ವಾಮೀಜಿ ಒಬ್ಬರನ್ನು ಆಹ್ವಾನಿಸಲು ತಿಳಿಸಿದರು. ಅದನ್ನು ನಿರಾಕರಿಸಿದ್ದಕ್ಕೆ ಆ ಸ್ವಾಮೀಜಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿ, ನಮಗೆ ಮದುವೆಯಾಗಿದೆ, ಮಕ್ಕಳಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಹೇಳಿದರು.
