Cinema: ಈಗಾಗಲೇ ಕರ್ನಾಟಕ ವಿಧಾನಸಭೆ ಮತದಾನ (Karnataka Election 2023) ಪ್ರಕ್ರಿಯೆ ಮುಕ್ತಾಯ ಆಗಿದ್ದು, ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಇದುವರೆಗೆ ಚಂದನವನದ ಸಿನಿಮಾ ನಟ ನಟಿಯರು ತಮ್ಮ ಸಿನಿಮಾ ಕಾರ್ಯಗಳನ್ನು ಬದಿಗಿಟ್ಟು ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ತಮಗೆ ಬೇಕಾದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾ, ರೋಡ್ ಶೋನಲ್ಲಿ ಸಿನಿಮಾ ಸ್ಟಾರ್ ಗಳು ಮಿಂಚಿದ್ದರು. ಇದೇ ಕಾರಣದಿಂದ ಸಿನಿಮಾ (Cinema) ಕೆಲಸಗಳನ್ನು ಬದಿಗೊತ್ತಿದ್ದರು.
ನಟರಾದ ಸುದೀಪ್, ದರ್ಶನ್, ಶಿವರಾಜ್‌ಕುಮಾರ್, ಧ್ರುವ ಸರ್ಜಾ, ದುನಿಯಾ ವಿಜಯ್, ಇದಲ್ಲದೇ ಅನೇಕ ನಿರ್ಮಾಪಕ, ನಿರ್ದೇಶಕರು ತಮಗೆ ಬೇಕಾದ ಅಭ್ಯರ್ಥಿ ಪರ ಕೆಲಸ ಮಾಡಲು ತಮ್ಮ ಸಿನಿಮಾ ಕಾರ್ಯಗಳನ್ನು ಮುಂದೆ ಹಾಕಿದ್ದರು. ಈಗ ಅವರೆಲ್ಲಾ ಮತ್ತೆ ಸಿನಿಮಾ ಮೂಡ್‌ಗೆ ಬಂದಿದ್ದಾರೆ.ಈ ಮೂಲಕ ಸಿನಿಮಾ ಚಟುವಟಿಕೆಗಳು ಮತ್ತೆ ಚೈತನ್ಯ ಮೂಡಿದೆ. ಅರ್ಧಕ್ಕೆ ನಿಲ್ಲಿಸಿದ್ದ ಚಿತ್ರೀಕರಣ ಮತ್ತೆ ಜೀವ ತಳೆಯಲಿದೆ.
ಶಿವಣ್ಣ ಈಗ “ಭೈರತಿ ರಣಗಲ್’ನತ್ತ ಮುಖ ಮಾಡಿದ್ದು, ನರ್ತನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಸ್ವತಃ ಶಿವರಾಜ್‌ಕುಮಾರ್ ಅವರೇ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ ಪಾತ್ರದಲ್ಲಿ ಶಿವಣ್ಣ ಮಿಂಚಿದ್ದರು. ಈಗ ಆ ಪಾತ್ರದ ಹೆಸರೇ ಸಿನಿಮಾ ಟೈಟಲ್ ಆಗಿದೆ.
ಸದ್ಯ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಾ, ರೋಡ್ ಶೋನಲ್ಲಿ ತೊಡಗಿಸಿಕೊಂಡಿದ್ದ ನಟ ಸುದೀಪ್ ಈಗ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೌದು, “ವಿಕ್ರಾಂತ್ ರೋಣ’ ಚಿತ್ರ ತೆರೆಕಂಡ ನಂತರ ಸೆಟ್ಟೇರುತ್ತಿರುವ ಸಿನಿಮಾ ಇದಾಗಿರುವುದರಿಂದ ಸಿನಿಮಾ ಮೇಲೆ ನಿರೀಕ್ಷೆ ಇದೆ. ಈಗಾಗಲೇ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸುದೀಪ್, ಅದರಲ್ಲೊಂದು ಸಿನಿಮಾದ ಪ್ರೋಮೋಶೂಟ್‌ನಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಸಿನಿಮಾದ ಚಿತ್ರೀಕರಣ ಜೂನ್ ಮೊದಲ ವಾರದಿಂದಲೇ ಆರಂಭವಾಗಲಿದೆ. ಈ ಮೂಲಕ ಸುದೀಪ್ ಚಿತ್ರೀಕರಣಕ್ಕೆ ಭರ್ಜರಿಯಾಗಿ ಎಂಟ್ರಿಕೊಡಲಿದ್ದಾರೆ.
ಇನ್ನು ಧ್ರುವ ಸರ್ಜಾ ತಮ್ಮ “ಕೆಡಿ’ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ನೀಡಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈಗ ಮತ್ತೆ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಕೆಡಿ’ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಟ ಸಂಜಯ್ ದತ್ ಪ್ರಮುಖ ಪಾತ್ರ ಮಾಡಿದ್ದಾರೆ.
ಇಷ್ಟೇ ಅಲ್ಲಾ ನಟ ದರ್ಶನ್, ದುನಿಯಾ ವಿಜಯ್, ಸಾಧುಕೋಕಿಲ, ನಟಿಯರಾದ ನಿಶ್ವಿಕಾ, ಹರ್ಷಿಕಾ ಪೂಣತ್ಛ ಸೇರಿದಂತೆ ಅನೇಕ ನಟ-ನಟಿಯರು ಪ್ರಚಾರ ಕಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಇದೀಗ ಮತ್ತೆ ಸಿನಿಮಾ ಕಡೆ ಮುಖ ಮಾಡಿರುವುದು ಸಿನಿಮಾ ಪ್ರಿಯರಿಗೆ ಇದೊಂದು ಸಂತಸದ ಸುದ್ದಿಯು ಹೌದು.
ಇದನ್ನು ಓದಿ: Marriage: ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಮುರಿದುಬಿದ್ದ ಮದುವೆ! ಅಂತದ್ದೇನಾಯಿತು?!
