Elon Musk: ಉದ್ಯಮಿ ಮತ್ತು ಟೆಕ್ ಮೊಗಲ್ ಎಲೋನ್ ಮಸ್ಕ್ ಯುಎಸ್ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಶೆಡ್ಡು ಹೊಡೆಯಲು ‘ಅಮೆರಿಕ ಪಾರ್ಟಿ’ ಎಂಬ ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಶನಿವಾರ ತಮ್ಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೌದು, ಒಂದು ಕಾಲದಲ್ಲಿ ಡೊನಾಲ್ಡ್ ಟ್ರಂಪ್ ಆಪ್ತಮಿತ್ರ ಮತ್ತು ಸಲಹೆಗಾರರಾಗಿದ್ದ ಬಿಲಿಯನೇರ್ ಎಲಾನ್ ಮಸ್ಕ್ ಇದೀಗ ಅವರ ವಿರುದ್ಧ ತಿರುಗಿ ಬಿದ್ದಿದ್ದು, “ಅಮೆರಿಕ ಪಾರ್ಟಿ” ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಎಲಾನ್ ಮಸ್ಕ್ ಮತ್ತು ಟ್ರಂಪ್ ನಡುವೆ ಮನಸ್ತಾಪ ಮೂಡಿದ್ದು, ಇಬ್ಬರು ಸಾರ್ವಜನಿಕವಾಗಿ ಪರಸ್ಪರ ಟೀಕೆಗಳಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ಟ್ರಂಪ್’ಗೆ ತಿರುಗೇಟು ನೀಡಲು ಮಸ್ಕ್ ಹೊಸ ಪಕ್ಷ ರಚನೆ ಮಾಡಿರುವುದಾಗಿ ತಿಳಿಸಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯೂ ಎನಿಸಿರು ಎಲಾನ್ ಮಸ್ಕ್ ಈ ಹಿಂದೆ ಕಳೆದ ವರ್ಷ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅತ್ಯಾಪ್ತ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಜೊತೆಗೆ ಟ್ರಂಪ್ ಅವರ ಪಕ್ಷಕ್ಕೆ ಅತೀ ಹೆಚ್ಚು ದಾನ ನೀಡಿದವರಲ್ಲಿ ಒಬ್ಬರೆನಿಸಿದ್ದರು. ಆದರೆ ಫೆಡರಲ್ ವೆಚ್ಚದಲ್ಲಿ ಕಡಿತ ಹಾಗೂ ಸರ್ಕಾರಿ ಉದ್ಯೋಗ ಕಡಿತ ಸೇರಿದಂತೆ ಹಲವು ವಿವಾದಾತ್ಮಕ ಅಂಶಗಳನ್ನು ಹೊಂದಿರುವ ಒನ್ ಬಿಗ್ ಬ್ಯೂಟಿಫುಲ್ ಮಸೂದೆ ವಿಚಾರವಾಗಿ ಈ ಇಬ್ಬರು ನಾಯಕರು ಕುಸ್ತಿಗಿಳಿದಿದ್ದು, ಈ ಇಬ್ಬರು ನಾಯಕರ ನಡುವಣ ಕಿತ್ತಾಟ ಜಾಗತಿಕ ಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು. ಇದೀಗ ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒನ್ ಬಿಗ್ ಬ್ಯೂಟಿಫುಲ್ ಮಸೂದೆಗೆ ಸಹಿ ಹಾಕಿದ ಮರು ದಿನವೇ ಟೆಕ್ ದೈತ್ಯ ಎಲಾನ್ ಮಸ್ಕ್ ಈ ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, “ಏಕಪಕ್ಷ” ವ್ಯವಸ್ಥೆ ಎಂದು ಕರೆಯುವ ಅಮೆರಿಕದ ರಾಜಕೀಯ ವ್ಯವಸ್ಥೆಗೆ ಹೇಗೆ ಸವಾಲು ಹಾಕಬಹುದು ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ನಾವು ಏಕಪಕ್ಷ ವ್ಯವಸ್ಥೆಯನ್ನು ಭೇದಿಸಲು ಹೊರಟಿರುವ ಮಾರ್ಗವೆಂದರೆ, ಲ್ಯೂಕ್ರಾದಲ್ಲಿ ಸ್ಪಾರ್ಟನ್ನರ ಅಜೇಯತೆಯ ಪುರಾಣವನ್ನು ಎಪಾಮಿನೊಂಡಾಸ್ ಹೇಗೆ ಛಿದ್ರಗೊಳಿಸಿದರು ಎಂಬುದರ ಒಂದು ರೂಪಾಂತರವನ್ನು ಬಳಸುವುದಾಗಿದೆ ಅಂದರೆ, ಯುದ್ಧಭೂಮಿಯಲ್ಲಿ ನಿಖರವಾದ ಸ್ಥಳದಲ್ಲಿ ಅತ್ಯಂತ ಕೇಂದ್ರೀಕೃತ ಬಲ ಎಂದು ವಿವರಿಸಿದ್ದಾರೆ.
