MP Pratap Simha: ಇಷ್ಟು ದಿನ ಕಾಂಗ್ರೆಸ್‌ನವರು 40% ಕಮಿಷನ್ (40 Percent Commission) ಅಂತಾ ಬೊಬ್ಬೆ ಹೊಡೆದುಕೊಳ್ತಿದ್ರು, ಈಗ ಅಧಿಕಾರವೇ ಅವರ ಕೈಯಲ್ಲಿದೆ. ಎಲ್ಲವನ್ನ ತನಿಖೆ ಮಾಡಿಸಿ, ಬಿಜೆಪಿಯವರೇ ತಪ್ಪು ಮಾಡಿದ್ರೂ ಹಿಡಿದು ಜೈಲಿಗೆ ಹಾಕಿಸಿ. ನೀವು ಸತ್ಯ ಸಂಧರು ಅನ್ನೋದನ್ನ ಸಾಬೀತು ಮಾಡಿಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ (MP Pratap Simha) ಕುಟುಕಿದ್ದಾರೆ.
ಹೌದು, ಮೈಸೂರಿನಲ್ಲಿ (Mysuru) ಮಾಧ್ಯಮಗಳ ಜೊತೆ ಮಾತನಾಡಿದ ಅವರು ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ಹಾಕಿ. ಕಾಂಗ್ರೆಸ್ ನವರು ಹೇಳಿದ್ದೇಲ್ಲ ಸತ್ಯ. ನೀವು ಸತ್ಯ ಸಂಧರು ಎಂಬುದನ್ನು ಸಾಬೀತು ಮಾಡಿ. ನಮ್ಮ ಪಕ್ಷದಲ್ಲೇ ಬಿಜೆಪಿಯವರೇ ತಪ್ಪು ಮಾಡಿದರೆ ಅವರನ್ನು ಹಿಡಿದು ಜೈಲಿಗೆ ಹಾಕಿ. ಈ ಮೂಲಕ ನಮ್ಮ ಪಕ್ಷವನ್ನ ಸ್ವಚ್ಚ ಮಾಡಲು ಅನುವು ಮಾಡಿಕೊಡಿ. ನೀವು ಬಿಜೆಪಿ ಸರ್ಕಾರದ ಮೇಲೆ ಏನೇನು ಆರೋಪ ಮಾಡಿದ್ದೀರಾ ಆವೆಲ್ಲದರ ಬಗ್ಗೆಯೂ ತುರ್ತು ತನಿಖೆ ಮಾಡಿ. ನಿಮ್ಮ ಮೇಲೆ ಜನ ಅತೀವ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸವನ್ನ ಉಳಿಸಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು ಗ್ಯಾರಂಟಿ ಯೋಜನೆ (Congress five guarantees) ಘೋಷಣೆ ಮಾಡುವಾಗ ನೀವು ಯಾವ ಷರತ್ತು ಹಾಕಿರಲಿಲ್ಲ. ಈಗಲೂ ಯಾವ ಷರತ್ತು ಇಲ್ಲದೇ ಗ್ಯಾರಂಟಿ ಜಾರಿ ಮಾಡಿ. ನನಗೂ ಫ್ರೀ, ನಿನಗೂ ಎಲ್ಲರಿಗೂ ಫ್ರೀ ಎಂದವರು ಸಿದ್ದರಾಮಯ್ಯ ಅವರೇ. ಈಗ ಸಿದ್ದರಾಮಯ್ಯ (CM Siddaramaiah) ಅವರ ಮೇಲೆ ಅವರೇ ಹೇಳಿದ ಮಾತಿನ ಒತ್ತಡವಿದೆ ಎಂದು ಹೇಳಿದರು.
