ಕಾಂಗ್ರೆಸ್‌ಗೆ ಭಾರೀ ದೊಡ್ಡ ಹೊಡೆತ ಬಿದ್ದಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಇಂದು ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ಬಯಸಿದ 23 ನಾಯಕರ ಗುಂಪಿನಲ್ಲಿ ಗುಲಾಂ ನಬಿ ಆಜಾದ್ ಕೂಡ ಸದಸ್ಯರಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಗುಲಾಂ ನಬಿ ಆಜಾದ್ ಜಮ್ಮು & ಕಾಂಗ್ರೆಸ್ ಪ್ರಚಾರ ಸಮಿತಿ ಸ್ಥಾನದಿಂದಲೂ ಅವರು ಕೆಳಗಿಳಿದಿದ್ದರು. ಇನ್ನು ಗುಲಾಂ ನಬಿ ಆಜಾದ್ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿಯು, ಕಾಂಗ್ರೆಸ್ ಪಕ್ಷವು ಯಾವುದೇ ನಾಯಕ ಹಾಗೂ ಸಿದ್ಧಾಂತವನ್ನು ಹೊಂದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ವ್ಯಂಗ್ಯವಾಡಿದೆ.
ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಕೂಡ ಅವರು ತ್ಯಜಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಜತೆಗಿನ 50 ವರ್ಷಗಳ ರಾಜಕೀಯ ಸಂಬಂಧವನ್ನು ಕೊನೆಗೊಳಿಸಿದ್ದಾರೆ. ಆಜಾದ್ ಭಿನ್ನಮತೀಯ ಜಿ-23 ರ ಮುಖ್ಯಸ್ಥರಾಗಿದ್ದಾರೆ ಮತ್ತು ಮೇಲ್ಮನೆಗೆ ನಾಮನಿರ್ದೇಶನಕ್ಕಾಗಿ ಪಕ್ಷದಿಂದ ನಿರ್ಲಕ್ಷಿಸಲ್ಪಟ್ಟಿದ್ದರು. ಪಕ್ಷದಲ್ಲಿ ನನ್ನ ಅನುಭವಕ್ಕೆ ಸೂಕ್ತ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನದಿಂದ ಗುಲಾಂ ನಬಿ ಆಜಾದ್ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ದಟ್ಟವಾಗಿದೆ. ರಾಜಕೀಯವಾಗಿ ಗುಲಾಂ ಮುಂದಿನ ನಡೆ ಏನು ಎನ್ನುವುದು ಇನ್ನೂ ನಿಗೂಢವಾಗಿದೆ.
ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಈ ಸಂಬಂಧ ಪತ್ರ ಬರೆದಿರುವ ಗುಲಾಂ ನಬಿ ಆಜಾದ್, 2013ರಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪಕ್ಷದ ಎಲ್ಲಾ ಹಿರಿಯ ಹಾಗೂ ಅನುಭವಿ ನಾಯಕರನ್ನು ಬದಿಗಿಟ್ಟಿದ್ದಾರೆ ಹಾಗೂ ಅನುಭವವೇ ಇಲ್ಲದವರು ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳಲು ಆರಂಭಿಸಿದರು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವೇದಿಕೆಗಳಲ್ಲಿ ಸಕ್ರಿಯರಾಗಿದ್ದ ಗುಲಾಂ ನಬಿ ಆಜಾದ್ ರಾಜೀನಾಮೆ ಪಕ್ಷದ ಅನೇಕ ನಾಯಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಅಕ್ರಮ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಮನ್ಸ್ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ್ದ ಗೌರವ ಯಾತ್ರೆಯಲ್ಲಿಯೂ ಸಹ ಗುಲಾಂ ನಬಿ ಆಜಾದ್ ಭಾಗಿಯಾಗಿದ್ದರು. ಅಲ್ಲದೇ ಈ ಸಂಬಂಧ ಪತ್ರಿಕಾಗೋಷ್ಠಿಗಳಲ್ಲಿಯೂ ಗುಲಾಂ ನಬಿ ಆಜಾದ್ ಮಾತನಾಡಿದ್ದರು.
ಗುಲಾಂ ನಬಿ ಆಜಾದ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಭಾರತೀಯ ರಾಜಕಾರಣಿಯಾಗಿದ್ದು, 2005 ರಿಂದ 2008 ರವರೆಗೆ ಜಮ್ಮು ಮತ್ತು ಕಾಶ್ಮೀರದ ಏಳನೇ ಮುಖ್ಯಮಂತ್ರಿಯಾಗಿದ್ದರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಅವರು ಫೆಬ್ರವರಿ 2021 ರವರೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
