Home » Congress 5 guarantee: 5 ಗ್ಯಾರಂಟಿ, 50 ಷರತ್ತುಗಳು; ಅರ್ಜಿ ಸಲ್ಲಿಕೆ ಎಲ್ಲಿ – ಹೇಗೆ ?- ಒಂದು ಆಮೂಲಾಗ್ರ ವರದಿ

Congress 5 guarantee: 5 ಗ್ಯಾರಂಟಿ, 50 ಷರತ್ತುಗಳು; ಅರ್ಜಿ ಸಲ್ಲಿಕೆ ಎಲ್ಲಿ – ಹೇಗೆ ?- ಒಂದು ಆಮೂಲಾಗ್ರ ವರದಿ

0 comments
Congress 5 guarantee

Congress 5 Guarantee : ರಾಜ್ಯದಲ್ಲಿ ಕಾಂಗ್ರೆಸ್ (congress) ಅಧಿಕಾರದ ಚುಕ್ಕಾಣಿ ಹಿಡಿದಿದೆ. ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದು ಘೋಷಣೆ ಮಾಡಿದೆ. ಜೊತೆಗೆ ಹಲವು ಷರತ್ತುಗಳನ್ನು ಮುಂದಿಟ್ಟಿದೆ. ಷರತ್ತುಗಳೇನು? ಯೋಜನೆಗೆ ಅರ್ಜಿ ಸಲ್ಲಿಕೆ ಎಲ್ಲಿ – ಹೇಗೆ? ಇದರ ಸಂಪೂರ್ಣ ವಿವರ ಇಲ್ಲಿದೆ.

ಕಾಂಗ್ರೆಸ್ ಚುನಾವಣೆ ಹೊತ್ತಲ್ಲಿ, ಗೃಹಜ್ಯೋತಿ 200 ಯೂನಿಟ್ ಉಚಿತ ವಿದ್ಯುತ್, ಪ್ರತೀ ಮನೆಗೆ ಗೃಹಲಕ್ಷ್ಮೀಯರಿಗೆ 2000, ಅನ್ನಭಾಗ್ಯ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ, ಯುವನಿಧಿ ನಿರುದ್ಯೋಗ ಭತ್ಯೆ 3 ಸಾವಿರ ಪದವೀಧರರಿಗೆ, 1,500 ಡಿಪ್ಲೊಮಾ ಪದವೀಧರರಿಗೆ, ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಎಂಬ ಐದು ಗ್ಯಾರಂಟಿ (Congress 5 guarantee) ಘೋಷಿಸಿದೆ.

ರಾಜ್ಯದ ಜನತೆ ಗ್ಯಾರಂಟಿಯ ಭರವಸೆಯಿಂದ ಮತಚಲಾಯಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಯ ಬಗ್ಗೆ ಹಲವು ಚರ್ಚೆಗಳಾಗಿದ್ದು, ರೊಚ್ಚಿಗೆದ್ದು ಜನತೆ ಕರೆಂಟ್ ಬಿಲ್ ಕಟ್ಟಲ್ಲ, ಬಸ್ ಟಿಕೆಟ್ ಮಾಡಲ್ಲ ಎಂದು ಪಟ್ಟು ಹಿಡಿದು ನಂತರ ಗ್ಯಾರಂಟಿಯ ಜಾರಿಗೆ ಸಿದ್ಧರಾಮಯ್ಯ ಸರ್ಕಾರ ಚಿಂತನೆ ನಡೆಸಿತು. ಕೊನೆಗೆ ಗ್ಯಾರಂಟಿ ಅನುಷ್ಟಾನವೂ ಆಯಿತು, ಆದರೆ ಷರತ್ತಿನ ಮೇಲೆ!.

ಗೃಹಜ್ಯೋತಿ ಯೋಜನೆ (Gruha Jyothi scheme):
ಪಂಚ ಗ್ಯಾರಂಟಿಗಳ ಪೈಕಿ ತಕ್ಷಣಕ್ಕೆ ಎರಡು ಗ್ಯಾರಂಟಿಗಳನ್ನು ನೀಡಲು (Congress Guarantee Declare) ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ರಾಜ್ಯಾದ್ಯಂತ ಬಾಡಿಗೆದಾರರಿಗೆ ಸೇರಿದಂತೆ ಎಲ್ಲರಿಗೂ 200 ಯೂನಿಟ್ ತನಕ ಗರಿಷ್ಠ ವಿದ್ಯುತ್ ಫ್ರೀ. ಗೃಹಜೋತಿ ಉಚಿತ ವಿದ್ಯುತ್ ಜುಲೈ ತಿಂಗಳಿನಿಂದಲೇ ಆರಂಭವಾಗಲಿದೆ.

ಗೃಹಜೋತಿ ಯೋಜನೆಯ ಷರತ್ತುಗಳೇನು?
• ಈ ಯೋಜನೆಯು ಗೃಹಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
• ಪ್ರತಿ ತಿಂಗಳ ಮಿಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸುವುದು.
• ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ ನೆಟ್ ಬಿಲ್​ ನೀಡುವುದು ಹಾಗೂ ಗ್ರಾಹಕರು ನೆಟ್​ ಬಿಲ್​ ಪಾವತಿಸಲು ನಿರ್ಧರಿಸಲಾಗಿದೆ.
• ಅರ್ಹ ಯೂನಿಟ್ ಅಥವಾ ಮೊತ್ತ ಆಗಿದ್ದ ಬಿಲ್ಲನ್ನು ನೀಡಲಾಗುವುದು.
• ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
• ಪ್ರತಿ ಫಲಾನುಭವಿಯು ತನ್ನ ಕಸ್ಟಮರ್​ ಐಡಿ ಹಾಗೂ ಅಕೌಂಟ್​ ಐಡಿಯನ್ನು ಆಧಾರ್‌ಗೆ ಜೋಡಣೆ ಮಾಡುವುದು ಕಡ್ಡಾಯ.
• ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತಜ್ಯೋತಿ ಯೋಜನೆಯ ಫಲಾನುಭವಿ ಗ್ರಾಹಕರುಗಳನ್ನು ಗೃಹಜ್ಯೋತಿ ಯೋಜನೆಯಡಿಯಲ್ಲಿ ಸೇರಿಸುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆ :
ಸೇವಾಸಿಂಧು ಪೋರ್ಟಲ್ ನಲ್ಲಿ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್ ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಕಂಪ್ಯೂಟರ್, ಮೊಬೈಲ್ ನಿಂದ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಇಂಧನ ಸಚಿವರು ತಿಳಿಸಿದ್ದಾರೆ. ಜೂನ್ 15 ರಿಂದ ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ.

ಬಾಡಿಗೆದಾರರು ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳನ್ನು ನೀಡಬೇಕು. ಬಾಡಿಗೆ ಮನೆಯಲ್ಲಿದ್ದು ಎಷ್ಟು ವರ್ಷವಾಯಿತು ಎಂಬುದರ ದಾಖಲೆ. ಮನೆ ಮಾಲೀಕ ಆಸ್ತಿ ತೆರಿಗೆ ಕಟ್ಟಿರಬೇಕು. ಎಷ್ಟು ಬಾಡಿಗೆ ಮನೆಗಳಿವೆ ಎಂದು ಘೋಷಣೆ ಮಾಡಿರಬೇಕು. ಬಾಡಿಗೆದಾರರು ವಿದ್ಯುತ್​​ ಬಿಲ್​ ಮತ್ತು ಬಾಡಿಗೆ ಕರಾರು ಪತ್ರವನ್ನು ಅರ್ಜಿಯ ಜೊತೆಗೆ ನೀಡಬೇಕು. ಇವೆಲ್ಲಾ ದಾಖಲೆಗಳಿದ್ದರೆ, ಬಾಡಿಗೆದಾರರು ವಿದ್ಯುತ್ ಬಿಲ್ ನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ, ಖಾತೆ ಸಂಖ್ಯೆ, ಬಾಡಿಗೆ, ಭೋಗ್ಯದ ಕರಾರು ಪತ್ರ ಸಲ್ಲಿಸಿ. ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಜೊತೆಗೆ, ಆಧಾರ್ ಅನ್ನು ಸಲ್ಲಿಸುವ ಮೂಲಕ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಬಹುದು.

ಗೃಹ ಲಕ್ಷ್ಮಿ ಯೋಜನೆ (gruha Lakshmi scheme):
ಗ್ಯಾರಂಟಿ ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ಈ ಎಲ್ಲಾ ಸೌಲಭ್ಯ BPL ಮತ್ತು APL ಕಾರ್ಡುದಾರರಿಗೂ ಲಭ್ಯ. ಇಂದು
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ʻಗೃಹಲಕ್ಷ್ಮೀʼ ಯೋಜನೆ ಭೌತಿಕ ಅರ್ಜಿ ಸಲ್ಲಿಕೆಯ ಮಾದರಿಯನ್ನು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಿದೆ.

ಗೃಹಲಕ್ಷ್ಮೀ ಯೋಜನೆಯ ಷರತ್ತುಗಳೇನು?

• ಅಂತ್ಯೋದಯ, ಬಿಪಿಎಲ್ (bpl) ಮತ್ತು ಎಪಿಎಲ್ ಪಡಿತರ (APL card) ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
• ಮನೆಯಲ್ಲಿ ಅತ್ತೆ-ಸೊಸೆ ಇದ್ದರೆ ಒಬ್ಬರಿಗೆ ಮಾತ್ರ ಯೋಜನೆಯ ಪ್ರಯೋಜನ ಸಿಗಲಿದೆ.
• ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ (Aadhar card) ಲಿಂಕ್ ಆಗಿರಬೇಕು.
• ಈ ಯೋಜನೆಗೆ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅವರು ಯೋಜನೆ ಲಾಭ ಪಡೆಯಲು ಅರ್ಹರಾಗಿರುವುದಿಲ್ಲ.
• ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್ಟಿ ರಿಟರ್ನ್ ಸಲ್ಲಿಸುವವರಾಗಿದ್ದರೆ ಗೃಹ ಲಕ್ಷ್ಮೀ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

ಅರ್ಜಿ ಸಲ್ಲಿಕೆ:
ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆಯಲು ಅಕೌಂಟ್ ನಂಬರ್, ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ನೀಡಬೇಕು. ಈ ಅರ್ಜಿ ನಮೂನೆಯನ್ನು ಸಲ್ಲಿಸಿದ್ರೆ ಮಾತ್ರ ಪ್ರತಿ ಕುಟುಂಬ ಮನೆಯೊಡತಿಗೆ 2000 ರೂಪಾಯಿ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಅರ್ಜಿ ಸಲ್ಲಿಸಲು
ಜೂನ್ 15 ರಿಂದ ಜುಲೈ 15 ರವರೆಗೆ ಅವಕಾಶವಿದೆ. ಆಗಸ್ಟ್ 15 ರ ನಂತರ ಈ ಯೋಜನೆಯಿಂದ ಮನೆಯ ಒಡತಿಗೆ ತಿಂಗಳಿಗೆ 2,000 ದೊರೆಯುತ್ತದೆ. ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಭೌತಿಕವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಶಕ್ತಿ ಯೋಜನೆ (Shakthi scheme):
ಕರ್ನಾಟಕ ವಿಧಾನ ಸಭೆ ಚುನಾವಣಾ ಮತ ಪ್ರಚಾರ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ (Congress 5 guarantee) ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವೂ ಜಾರಿಯಾಗಿದೆ. ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ. ಇದೇ ತಿಂಗಳು 11 ರಿಂದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಇರಲಿದೆ.
APL,BPL ಎಂದು ಯಾವುದೇ ನಿಯಮ ಇಲ್ಲ. ಎಲ್ಲ ಮಹಿಳೆಯರಿಗೆ ಇದು ಅನ್ವಯಿಸುತ್ತದೆ. ಅಬ್ಬಬ್ಬಾ!! ಎಲ್ಲಿ ಹೋಗ್ಬೇಕಾದ್ರೂ ಖರ್ಚಿಲ್ಲದೆ ಹೋಗಿರಬಹುದು ಎಂದು ಮಹಿಳೆಯರು ಖುಷಿಯಲ್ಲಿದ್ದರೆ ಈ ಮಧ್ಯೆ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಕಂಡಿಷನ್ಸ್ ಹಾಕಿದೆ.

ಷರತ್ತುಗಳೇನು?
• ಕರ್ನಾಟಕದ ಮಹಿಳಾ ನಾಗರಿಕರಿಗೆ ಮಾತ್ರ ಈ ಯೋಜನೆ ಲಭ್ಯ
• ಸರ್ಕಾರಿ ಬಸ್​​ನಲ್ಲಿ ಪ್ರಯಾಣ ಮಾಡಲು ಮಹಿಳೆಯರಿಗೆ ಪ್ರತ್ಯೇಕ ಬಸ್ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ.
• ಉಚಿತ ಬಸ್ ಪಾಸ್ ಪಡೆದುಕೊಳ್ಳಲು ಆಧಾರ್ ಕಾರ್ಡ್​ ಕಡ್ಡಾಯ
• ಈ ಯೋಜನೆಗೆ ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡುವ ಅಗತ್ಯ ಇರುವುದಿಲ್ಲ
• ರಾಜ್ಯ ಗಡಿಯೊಳಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ, ಹೊರ ರಾಜ್ಯಕ್ಕೆ ಉಚಿತ ಪ್ರಯಾಣ ಇರುವುದಿಲ್ಲ.
• ಒಬ್ಬರು ಎಷ್ಟು ಸಲ ಬೇಕಾದರೂ ಪ್ರಯಾಣಿಸಬಹುದು.
• ಕೆ ಎಸ್ ಆರ್ ಟಿ ಸಿಯ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ (ತಡೆರಹಿತ ಸಾರಿಗೆಗಳು ಒಳಗೊಂಡಂತೆ ) ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು ರಾಜ್ಯಾಧ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನಿಡಲಾಗಿದೆ.
• ರಾಜಹಂಸ, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪ್ಲಸ್ ಸಾರಿಗಗೆಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವು ಅನ್ವಯಿಸುವುದಿಲ್ಲ.
• ಶಕ್ತಿ ಯೋಜನೆಯ ದೈನಿಕ ಪಾಸು, ಮಾಸಿಕ ಪಾಸು, ಸಾಂದರ್ಭಿಕ ಒಪ್ಪಂದ ಹಾಗೂ ಖಾಯಂ ಗುತ್ತಿಗೆ ಪ್ಯಾಕೇಜ್ ಮುಂತಾದ ಸೇವೆಗಳಿಗೆ ಅನ್ವಯಿಸುವುದಿಲ್ಲ.
• ಆಧಾರ್ ಕಾರ್ಡ್, ಚುನಾವಮಾ ಆಯೋಗ ವಿಚತರಿಸುವ, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ
ವಾಸಸ್ಥಳ ನಮೂದಿಸಿರುವ ಭಾರತ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು ವಿತರಿಸುವ ಗುರುತಿನ ಚೀಟಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಗುರುತಿನ ಚೀಟಿ ಈ ದಾಖಲೆಗಳನ್ನು ಉಚಿತ ಬಸ್ ಪ್ರಯಾಣಕ್ಕೆ ಅಗತ್ಯವಾಗಿ ಬೇಕಿದೆ.

ಅರ್ಜಿ ಸಲ್ಲಿಕೆ:
ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವವರೆಗೆ ಮೇಲೆ ತಿಳಿಸಿರುವ ಗುರುತಿನ ಚೀಟಿಗಳನ್ನು ಪರಿಗಣಿಸಿ, ಶೂನ್ಯ ಮೊತ್ತದ ಮಹಿಳೆಯರ ಉಚಿತ ಟಿಕೆಟ್ ಗಳನ್ನು ವಿತರಿಸಲು ಸೂಚಿಸಿದೆ.

ಯುವನಿಧಿ ಯೋಜನೆ (Yuva nidhi scheme):
ಚುನಾವಣೆ ಸಂದರ್ಭದಲ್ಲಿ ಕೆಲಸ ಸಿಗದ ಪದವಿ ಹಾಗೂ ಡಿಪ್ಲೋಮಾ
ಪೂರೈಸಿದ ಯುವಕ-ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ತಿಳಿಸಿತ್ತು. ಆದರೆ ಇದೀಗ 2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಹಾಗೂ ಡಿಪ್ಲೋಮಾ ಕೋರ್ಸ್ ಗಳನ್ನು ಪೂರೈಸಿದ
ಯುವಕ-ಯುವತಿಯರಿಗೆ ಯುವ ನಿಧಿ ಯೋಜನೆಯಡಿ ಕ್ರಮವಾಗಿ ತಿಂಗಳಿಗೆ ರೂಪಾಯಿ 3,000 ಹಾಗೂ ರೂಪಾಯಿ 1,500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.

ಯುವನಿಧಿ ಮಾರ್ಗಸೂಚಿಗಳೇನು?
• ಪದವಿ / ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಯಾವುದೇ ಕೆಲಸ ದೊರಕದ ಕನ್ನಡಿಗರು ಮಾತ್ರ ಯುವ ನಿಧಿ ಯೋಜನೆಗೆ ಅರ್ಹರು.
• ಒಟ್ಟು ಎರಡು ವರ್ಷಗಳವರೆಗೆ ಈ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯಬಹುದು.
• ಒಂದುವೇಳೆ 2 ವರ್ಷದೊಳಗೆ ಉದ್ಯೋಗ ಸಿಕ್ಕರೆ ಭತ್ಯೆ ಪಾವತಿ ಸ್ಥಗಿತಗೊಳಿಸಲಾಗುವುದು
• ಉದ್ಯೋಗ ದೊರಕಿದ ಬಗ್ಗೆ ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿದರೆ ಅಥವಾ ಉದ್ಯೋಗ ಸಿಕ್ಕಿದೆ ಎಂದು ಘೋಷಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ
• ನಿರುದ್ಯೋಗ ಭತ್ಯೆಯನ್ನು ನೇರ ನಗದು ಪಾವತಿ ವ್ಯವಸ್ಥೆ ಮೂಲಕ ಪಾವತಿ ಮಾಡಲಾಗುತ್ತದೆ
• ಸೇವಾ ಸಿಂಧು ಪೋರ್ಟಲ್ ಮೂಲಕ ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬೇಕು.
• ಪದವಿ ಅಥವಾ ಡಿಪ್ಲೋಮಾ ಬಳಿಕ ಉನ್ನತ ವ್ಯಾಸಂಗ ಮುಂದುವರಿಸಿದರೆ ಅಂಥವರಿಗೆ ಈ ಭತ್ಯೆ ಇಲ್ಲ
• ಅಪ್ರೆಂಟಿಸ್ ವೇತನ ಪಡೆಯುತ್ತಿರುವ ಯುವಕರಿಗೆ ಈ ಭತ್ಯೆ ಇಲ್ಲ
• ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಹಾಗೂ ಬ್ಯಾಂಕ್​​ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಮಾಡುತ್ತಿರುವವರಿಗೂ ಯುವ ನಿಧಿ ಯೋಜನೆಯಡಿ ಭತ್ಯೆ ಸಿಗುವುದಿಲ್ಲ

ಅನ್ನಭಾಗ್ಯ ಯೋಜನೆ:
ಅನ್ನಭಾಗ್ಯ (Annabhagya scheme) ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತದೆ. ಜುಲೈ 1 ರಿಂದ ಜಾರಿಗೆ ಬರಲಿದೆ.

ಯೋಜನೆಯ ಮಾರ್ಗಸೂಚಿಗಳು:
• ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಮೂವರು ಸದಸ್ಯರಿದ್ದರೆ ತಿಂಗಳಿಗೆ 35 ಕೆಜಿ ಆಹಾರ ಧಾನ್ಯ ಫ್ರೀ ದೊರೆಯಲಿದೆ.
• ಈ ಕುಟುಂಬಗಳಲ್ಲಿ 4 ಜನರಿದ್ದರೆ ತಲಾ 10 ಕೆಜಿ ಅಕ್ಕಿಯಂತೆ ಒಟ್ಟು 40 ಕೆಜಿ, 5 ಇದ್ದರೆ 50 ಕೆಜಿ, ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಹಾಗಾಗಿ, ಪ್ರತಿ ವ್ಯಕ್ತಿಗೆ 10 ಕೆಜಿಯಂತೆ ಉಚಿತ ಆಹಾರ ಧಾನ್ಯ ಸಿಗಲಿದೆ.
• ಬಿಪಿಎಲ್ ಕಾರ್ಡ್​ ಹೊಂದಿರುವ ಕುಟುಂಬಗಳಲ್ಲಿ ಪ್ರತಿ ಸದಸ್ಯರಿಗೆ 10 ಕೆ.ಜಿ.ಯಂತೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ.

 

ಇದನ್ನು ಓದಿ: ತೇಜಸ್ವಿ ಸೂರ್ಯರಿಗೆ ಖೆಡ್ಡಾ ತೋಡಿದ ಕಾಂಗ್ರೆಸ್: ತೇಜಸ್ವಿಯನ್ನು ವಶ ಮಾಡಲು ಹೊರಟ ಆ ಸ್ತ್ರೀ ಯಾರು ?

You may also like

Leave a Comment