BY vijayendra: ಲೋಕಸಭಾ ಚುನಾವಣೆ ಸಮೀಪಸುತ್ತಿದೆ. ಇದರ ಮಧ್ಯದಲ್ಲಿ ರಾಜ್ಯದಲ್ಲಿ ಬಿಜೆಪಿದಲ್ಲಿ ಇನ್ನೂ ನೂತನ ರಾಜ್ಯಾಧ್ಯಕ್ಷರ ಆಯ್ಕೆ ನಡೆದಿಲ್ಲ. ಇದೀಗ ತೀವ್ರ ಕುತೂಹಲಕರ ವಿಷಯವೆಂದರೆ, ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ಶಾಸಕ ಬಿ ವೈ ಜಯೇಂದ್ರ (BY vijayendra)ಅವರು ಒಂದು ವಾರದೊಳಗೆ ನೇಮಕಗೊಳ್ಳಲಿದ್ದಾರೆ ಎಂಬ ಮಾತೊಂದು ಕೇಳಿ ಬರುತ್ತಿದೆ.
ಇತ್ತೀಚೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ಕಾವೇರಿ ವಿಚಾರವಾಗಿ ನಡೆದ ಪ್ರತಿಭಟನೆ ಬೆನ್ನಲ್ಲೇ ಈ ಗುಸುಗುಸು ಮಾತೊಂದು ಕೇಳಿ ಬರುತ್ತಿದೆ. ಇದರ ಬಗ್ಗೆ ಚರ್ಚೆ ಕೂಡಾ ಆಗಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಭರದಿಂದ ಸಿದ್ಧತೆ ನಡೆಸುವ ಕುರಿತು ಮುನ್ಸೂಚನೆ ದೊರಕಿದೆ.
ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಪ್ರತಿಪಕ್ಷಗಳ ನಾಯಕರು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆ ನೇಮಕಾತಿಗೆ ಚಾಲನೆ ನೀಡಲು ವರಿಷ್ಠರು ತೀರ್ಮಾನ ಮಾಡಿದ್ದಾರೆ ಎಂದು ಈ ವಿಷಯವನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಬಿಜೆಪಿ ಉಪಧ್ಯಕ್ಷರಾಗಿರುವ ವಿಜಯೇಂದ್ರ ಅವರನ್ನೇ ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಲಿಂಗಾಯತ ಕೋಮಿನ ಮತಗಳನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಪ್ರಚಾರ ಮಾಡುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಅಲ್ಲದೇ ವಿಜಯೇಂದ್ರ ಅವರು ಈ ಹಿಂದೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ನಡೆದ ಉಪಚುನಾವಣೆಯಲ್ಲಿ ಕೆಲಸ ಮಾಡಿರುವುದರಿಂದ ಇದು ಸುಲಭ ಸಾಧ್ಯ ಎನ್ನಲಾಗಿದೆ.
ಈ ಮೊದಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಹೆಸರುಗಳು ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೆ ಕೇಳಿಬರುತ್ತಿದ್ದವು. ಇದೀಗ ವಿಜಯೇಂದ್ರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಒಂದು ವಾರದೊಳಗೆ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡರೆ ರಾಜ್ಯ ಬಿಜೆಪಿಯಲ್ಲಿ ಹೊಸ ಹುರುಪೊಂದು ಮೂಡಿ ಬರಲಿದೆ ಎನ್ನಲಾಗಿದೆ.
