KN Rajanna on Sudeep: ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಗೆದ್ದು ಬೀಗಿದ್ದು, ಈಗ ಹಳೆಯ ಮಾತು. ಆದರೂ ಈ ಬಗ್ಗೆ ವಿಮರ್ಶೆಗಳು ಇಂದಿಗೂ ನಡೆಯುತ್ತಲೇ ಇದೆ. ಬಿಜೆಪಿ ಸೋಲಲು ಕಾರಣವೇನು? ಎಂಬ ಮಾತುಗಳನ್ನು ಬಿಜೆಪಿ ನಾಯಕರುಗಳೇ ಆಗಾಗ್ಗೆ ಅಲ್ಲಲ್ಲಿ ಹೇಳಿದ್ದಾರೆ. ಇದರ ಮಧ್ಯೆ ಬಿಜೆಪಿ ತಮ್ಮ ಸ್ಟಾರ್ ಪ್ರಚಾರಕ್ಕಾಗಿ ಅನೇಕ ಸಿನಿಮಾ ನಟರನ್ನು, ನಟಿಯರನ್ನು ಕೂಡಾ ಬಳಸಿಕೊಂಡಿತ್ತು. ಇದನ್ನು ಕಾಂಗ್ರೆಸ್ ಕೂಡಾ ಮಾಡಿತು.
ಆದರೆ ಈ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡಿದವರ ವಿರುದ್ಧ ಸಚಿವ, ವಾಲ್ಮೀಕಿ ಸಮುದಾಯದ ಮುಖಂಡ ಕೆ ಎನ್ ರಾಜಣ್ಣ ಮಾತಾಡಿದ್ದಾರೆ (KN Rajanna on Sudeep). ಅವರು ಹೇಳಿರುವ ಪ್ರಕಾರ, ರಾಜ್‌ಕುಮಾರ್ (Rajkumar) ರಾಜಕೀಯಕ್ಕೆ ಬಂದು ಏನು ಬೇಕಾದರೂ ಮಾಡಬಹುದಿತ್ತು. ಆದರೆ ಅವರು ರಾಜಕೀಯದಿಂದಲೇ ದೂರ ಇದ್ದರು. ಅದಕ್ಕೆ ಅವರು ದೇವತಾಮನುಷ್ಯ ಎನಿಸಿಕೊಂಡರು. ಸಿನಿಮಾ ನಟರು ರಾಜಕೀಯಕ್ಕೆ ಬಂದರೆ ಗೌರವ ಕಡಿಮೆಯಾಗುತ್ತದೆʼ ಎಂದು ಅವರು ಹೇಳಿದ್ದಾರೆ
ಕಿಚ್ಚ ಸುದೀಪ್ ಅವರು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ನೋವಾಗಿದೆ. ಒಂದೇ ಸಮುದಾಯದ ಇಬ್ಬರು ಸ್ಪರ್ಧೆ ಮಾಡಿದಾಗ, ಸುದೀಪ್ ಒಬ್ಬರ ಪರವಾಗಿ ಮಾತ್ರ ಪ್ರಚಾರ ಮಾಡಿದರು. ಅವರು ಸಾಮಾನ್ಯ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಸುಮ್ಮನಾಗಬಹುದಿತ್ತು. ಒಂದೇ ಸಮುದಾಯದವರು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದಾಗ ಇಬ್ಬರ ಪರವಾಗಿ ಪ್ರಚಾರ ಮಾಡಿದರೆ ಅದು ನಟನ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಸುದೀಪ್ ಅವರಿಗೆ ಅನುಭವ ಕಡಿಮೆ ಇದೆ, ಅವರು ಶ್ರೇಷ್ಠ ನಟನಾಗಬಹುದು. ಆದರೆ ಅರ್ಥ ಮಾಡಿಕೊಂಡು ಮುಂದುವರಿಯಬೇಕು ಎಂದು ದಾವಣಗೆರೆಯಲ್ಲಿ ಮಾಧ್ಯಮಗಳ ಮುಂದೆ ಹೇಳಿದರು.
ಇದನ್ನೂ ಓದಿ: ಏಕಾಂತದಲ್ಲಿದ್ದ ಪ್ರೇಮಿಗಳಿಗೆ ಗುಂಡಿಕ್ಕಿ ಕೊಂದು, ಮೊಸಳೆ ಬಾಯಿಗೆ ಎಸೆದ ಹೆತ್ತವರು- ಇದೊಂದು ಮರ್ಯಾದಾ ಹತ್ಯೆ
