40 Percent Commission Issue: ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಶೇ 40 ಕಮಿಷನ್ (40 Percent Commission Issue) ತನಿಖೆ ಮಾಡುತ್ತೇವೆ ಎಂದು ಹೇಳಿದ್ದು, ಈ ಹಿನ್ನೆಲೆ ಶೇ 40 ಕಮೀಷನ್ ತನಿಖೆ ಮಾಡುವ ವಿಚಾರವನ್ನು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಒಂದು ಸವಾಲು ಆಗಿ ಸ್ವೀಕರಿಸಿದ್ದಾರೆ.
ಹೌದು, ಈ ಕುರಿತಾಗಿ ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟಾ ಶ್ರೀನಿವಾಸ್ , ʼಸಿದ್ದರಾಮಯ್ಯ ಮತ್ತು ಡಿಕೆಶಿ ಶೇ 40 ಕಮಿಷನ್ ತನಿಖೆ ಮಾಡುತ್ತೇವೆ ಅಂದಿದ್ದಾರೆ. ಈ ತನಿಖೆಯನ್ನು ಮುಕ್ತವಾಗಿ ನಾನು ಸ್ವಾಗತ ಮಾಡುತ್ತೇನೆ. ಸಮಾಜ ಕಲ್ಯಾಣ, ಹಿಂದುಳಿದ ಇಲಾಖೆ ಮಂತ್ರಿಯಾಗಿದ್ದ ನನ್ನಿಂದಲೇ ಈ ತನಿಖೆ ಪ್ರಾರಂಭವಾಗಲಿ. ಸಂಪೂರ್ಣ ತನಿಖೆಯಾಗಲಿ. ಯಾವ ತನಿಖೆಯಲ್ಲಿ ಏನಾಗುತ್ತೆ ಎಂಬುದು ಬಹಿರಂಗ ಆಗಲಿ. ವ್ಯಕ್ತಿಗತ ದ್ವೇಷಕ್ಕೆ ಅವಕಾಶ ಕೊಡಬಾರದು, ಆದರೂ ತನಿಖೆ ಮಾಡುವುದಿದ್ದರೆ ಮಾಡಲಿʼ ಎಂದು ಅವರು ಹೇಳಿದ್ದಾರೆ
ಅದಲ್ಲದೆ ಡಿಕೆಶಿ ಪೊಲೀಸರಿಗೆ ನಿನ್ನೆ ಕೇಸರಿ ಶಾಲಿನ ಆರೋಪ ಮಾಡಿದ್ದಾರೆ. ಯಾವತ್ತಿಗೂ ಕೇಸರಿ ಶಾಲಿಗೆ ಈ ರಾಜ್ಯದಲ್ಲಿ ನಿಷೇಧ ಇಲ್ಲ, ಕರ್ತವ್ಯದಲ್ಲಿ ಇದ್ದಾಗ ಯಾರೂ ಕೇಸರಿ ಪ್ರಯೋಗ ಮಾಡಿಲ್ಲʼ ಎನ್ನುವ ಮೂಲಕ ಪೊಲೀಸರನ್ನು ಸಮರ್ಥಿಸಿಕೊಂಡಿದ್ದಾರೆ ಕೋಟ.
ಅದಲ್ಲದೆ ಡಿಕೆಶಿ ಮತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ ದ್ವೇಷ ಸಾಧಿಸೋ ವಾತಾವರಣ ಕಂಡು ಬರ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲʼ ಎಂದು ಕೋಟ ಕಿಡಿಕಾರಿದ್ದಾರೆ
ʼಮುಂದಿನ ದಿನಗಳು ಹಿಂದುತ್ವ ಮತ್ತು ಹಿಂದುಗಳಿಗೆ ಕಠಿಣ ದಿನವಾಗಲಿದೆ. ಮುಂದಿನ ದಿನಗಳಲ್ಲಿ ಗೋಹತ್ಯೆ ಕಾಯ್ದೆ, ಮತಾಂತರ ಕಾಯ್ದೆ ವಿರೋಧಿಸುವ ಕಾರ್ಯತಂತ್ರ ರೂಪುಗೊಳ್ಳುತ್ತಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಾಗಿ ನಾವು ಜನಸಾಮಾನ್ಯರಿಗೆ ರಕ್ಷಣೆ ಕೊಡುತ್ತೇವೆʼ ಎಂದು ಕೋಟ ಸ್ಪಷ್ಟವಾಗಿ ತಿಳಿಸಿದ್ದಾರೆ.
