DL-RC Smart Card: ಡಿಜಿಟಲ್ ತಂತ್ರಜ್ಞಾನವನ್ನು ಇನ್ನಷ್ಟು ಅಪ್ಡೇಟ್ ಮಾಡಲು ಮುಂದಾಗಿರುವ ಸರ್ಕಾರ, ಡಿಎಲ್ ಹಾಗೂ ಆರ್‌ಸಿಗೆ ಹೊಸ ರೂಪ ಕೊಡೋಕೆ ಮುಂದಾಗಿದೆ. ಈಗಾಗಲೇ ನಿಮ್ಮ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ಗಳಲ್ಲಿ ಚಿಪ್ ಇದೆ. ಇನ್ಮುಂದೆ ಹೊಸ ಡಿಎಲ್‌ಗಳಲ್ಲಿ ಕ್ಯೂಆರ್ ಕೋಡ್ ಕೂಡಾ ಇರಲಿದೆ.
ಹೌದು, ಈಗಾಗಲೇ ವಾಹನಗಳಿಗೆ ಹೊಸದಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಬೇಕು ಅಂತಾ ಹೇಳಿದ್ದ ಸರ್ಕಾರ, ಇದೀಗ ಮತ್ತೊಂದು ಹೊಸ ಕಾನೂನು ಜಾರಿಗೆ ತಂದಿದೆ. ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿರುವ ಹೊಸ ಮಾದರಿಯ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ನಿಂದ (DL-RC Smart Card) ಏನೆಲ್ಲಾ ಪ್ರಯೋಜನ ಎಂದು ಇಲ್ಲಿ ತಿಳಿಸಲಾಗಿದೆ.
ಮುಖ್ಯವಾಗಿ ದೇಶಾದ್ಯಂತ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ಗಳು ಒಂದೇ ರೀತಿ ಇರಬೇಕು ಅನ್ನೋದು ಸರ್ಕಾರದ ಚಿಂತನೆ. ವಾಹನ ಚಾಲನಾ ಪರವಾನಗಿ ಹಾಗೂ ವಾಹನಗಳ ನೋಂದಣಿ ಪ್ರಮಾಣ ಪತ್ರದಲ್ಲಿ ಇರುವ ಎಲ್ಲಾ ರೀತಿಯ ಸಮಸ್ಯೆ ನಿವಾರಣೆ ಮಾಡಬೇಕು ಅನ್ನೋದು ಸರ್ಕಾರದ ನಿಲುವು. ಇದಕ್ಕಾಗಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಒಂದಷ್ಟು ನಿಯಮಾವಳಿಗಳನ್ನ ರೂಪಿಸಿದೆ. ಈ ನಿಯಮಾವಳಿಗಳ ಪ್ರಕಾರವೇ ಎಲ್ಲ ರಾಜ್ಯಗಳಲ್ಲೂ ಹೊಸ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಮುಖ್ಯವಾಗಿ ಡಿಎಲ್‌ನ ಮುಂಭಾಗದಲ್ಲಿ ಕಾರ್ಡ್ ಮಾಲೀಕರ ಹೆಸರು, ಫೋಟೋ, ಅಡ್ರೆಸ್, ಹುಟ್ಟಿದ ದಿನಾಂಕ, ರಕ್ತದ ಗುಂಪು ಸೇರಿದಂತೆ ಹಲವು ವಿವರಗಳು ಇರುತ್ತವೆ. ಡಿಎಲ್‌ನ ಹಿಂಭಾಗದಲ್ಲಿ ನಿಮ್ಮ ಮೊಬೈಲ್ ನಂಬರ್, ಯಾವೆಲ್ಲಾ ಮಾದರಿಯ ವಾಹನ ಚಲಾಯಿಸಲು ಅನುಮತಿ ಇದೆ ಅನ್ನೋ ವಿವರ ಇರುತ್ತೆ. ಇನ್ನು ಈ ಎಲ್ಲಾ ವಿಷಯಗಳೂ ಚಿಪ್‌ಗಳಲ್ಲಿ ಇರುವ ಜೊತೆಯಲ್ಲೇ ಕ್ಯೂ ಆರ್ ಕೋಡ್‌ನಲ್ಲೂ ಇರಲಿದೆ. ಅಷ್ಟೇ ಅಲ್ಲ, ತುರ್ತು ಸಂಪರ್ಕ ಸಂಖ್ಯೆ ಕೂಡಾ ಇರುತ್ತೆ. ಪೊಲೀಸರು ಅಥವಾ ಆರ್‌ಟಿಒ ಸಿಬ್ಬಂದಿ ನಿಮ್ಮ ಡಿಎಲ್ ಸ್ಮಾರ್ಟ್ ಕಾರ್ಡ್ ಅನ್ನು ತಮ್ಮ ಮೊಬೈಲ್‌ನಲ್ಲಿ ಒಮ್ಮೆ ಸ್ಕ್ಯಾನ್ ಮಾಡಿದ ಕೂಡಲೇ ಈ ಎಲ್ಲಾ ಮಾದರಿ ಅವರಿಗೆ ಲಭ್ಯ ಆಗುವ ರೀತಿ ಸ್ಮಾರ್ಟ್ ಕಾರ್ಡ್‌ನಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ.
ಇನ್ನು ಹೊಸ ಆರ್‌ಸಿ ಕಾರ್ಡ್ ಮುಂಭಾಗದಲ್ಲಿ ವಾಹನದ ನೋಂದಣಿ ಸಂಖ್ಯೆ, ನೋಂದಣಿ ಆದ ದಿನಾಂಕ, ಕಾರ್ಡ್ ಅಂತ್ಯ ಆಗುವ ದಿನಾಂಕ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ ಜೊತೆಯಲ್ಲೇ ವಾಹನಗಳ ಟ್ರ್ಯಾಕಿಂಗ್ ಸಿಸ್ಟಂ ಕೂಡಾ ಅಳವಡಿಕೆ ಮಾಡಲಾಗಿರುತ್ತೆ. ಇನ್ನು ಆರ್‌ಸಿ ಕಾರ್ಡ್‌ನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನದ ಮಾದರಿ, ಸೀಟುಗಳ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳನ್ನು ನಮೂದು ಮಾಡಲಾಗಿರುತ್ತದೆ.
ಹೊಸ ಮಾದರಿಯ ಕಾರ್ಡ್‌ಗಳಲ್ಲಿ ಕ್ಯು ಆರ್ ಕೋಡ್ ಇರುತ್ತೆ ಅನ್ನೋದು ಅತಿ ಮುಖ್ಯ ವಿಚಾರ. ಏಕೆಂದರೆ ಪೊಲೀಸರು ಅಥವಾ ಆರ್‌ಟಿಒ ತಪಾಸಣೆ ವೇಳೆ ವಾಹನದ ದೃಢೀಕರಣ ಹಾಗೂ ವಾಹನ ಮಾಲೀಕರ ಮಾಹಿತಿಯನ್ನು ಆದಷ್ಟು ಬೇಗ ಸಂಗ್ರಹ ಮಾಡಲು ಈ ಕ್ಯು ಆರ್ ಕೋಡ್ ನೆರವಾಗಲಿದೆ. ಈಗ ಕೊಡ್ತಿರುವ ಚಿಪ್ ಸಹಿತ ಸ್ಮಾರ್ಟ್ ಕಾರ್ಡ್‌ಗಳನ್ನ ಪಿವಿಸಿ ಬಳಸಿ ತಯಾರು ಮಾಡಲಾಗುತ್ತಿದೆ. ಈ ಕಾರ್ಡ್‌ಗಳು ವರ್ಷದಿಂದ ವರ್ಷಕ್ಕೆ ಮಾಸಿ ಹೋಗುತ್ತವೆ. ಅಕ್ಷರ ಅಳಿಸಿ ಹೋಗಬಹುದು, ಕಾರ್ಡ್ ಮುರಿಯಬಹುದು. ಆದರೆ, ಮುಂದಿನ ವರ್ಷದಿಂದ ಹೊಸದಾಗಿ ಕೊಡುವ ಕಾರ್ಡ್‌ಗಳನ್ನ ಪಾಲಿ ಕಾರ್ಬೊನೇಟ್‌ನಿಂದ ತಯಾರು ಮಾಡಲಾಗಿರುತ್ತೆ. ಈ ಕಾರ್ಡ್‌ಗಳು ಮುರಿಯೋದಿಲ್ಲ. ಜೊತೆಗೆ ಅಕ್ಷರಗಳೂ ಕೂಡಾ ಅಳಿಸಿ ಹೋಗೋದಿಲ್ಲ.
ಸದ್ಯ ಬಳಕೆಯಲ್ಲಿ ಇರುವ ಕಾರ್ಡ್ ಬದಲಾವಣೆ ಮಾಡಬೇಕಾ? ಬೇಡವಾ ಎನ್ನುವ ಪ್ರಶ್ನೆಗೆ ಸರ್ಕಾರ ಈ ರೀತಿ ಉತ್ತರ ನೀಡಿದ್ದು, ಮುಂದಿನ ವರ್ಷ ಅಂದರೆ 2024ರ ಫೆಬ್ರವರಿ ನಂತರ ನೀಡುವ ಹೊಸ ಕಾರ್ಡ್‌ಗಳಲ್ಲಿ ಕ್ಯೂ ಆರ್ ಕೋಡ್ ಅಳವಡಿಕೆ ಮಾಡಲಾಗುತ್ತದೆ. ಸದ್ಯ ಬಳಕೆಯಲ್ಲಿ ಇರುವ ಕಾರ್ಡ್‌ಗಳನ್ನ ಬದಲಾವಣೆ ಮಾಡಬೇಕಿಲ್ಲ. ಆದರೆ, ಡಿಎಲ್ ರಿನ್ಯೂವಲ್ ಮಾಡುವ ವೇಳೆ ಹಾಗೂ ಫೆಬ್ರವರಿ ನಂತರ ಹೊಸ ವಾಹನ ಖರೀದಿ ಮಾಡುವ ವೇಳೆ ಕ್ಯೂ ಆರ್ ಕೋಡ್ ಇರುವ ಹೊಸ ರೀತಿಯ ಸ್ಮಾರ್ಟ್ ಕಾರ್ಡ್ ಸಿಗುತ್ತೆ.
ಇದನ್ನು ಓದಿ: Number Plate: ವಾಹನ ಮಾಲಿಕರಿಗೆ ಮುಖ್ಯ ಮಾಹಿತಿ- ನಂಬರ್ ಪ್ಲೇಟ್ ಬಗ್ಗೆ ಇಲ್ಲಿರೋ ಮಾಹಿತಿಯನ್ನು ತಪ್ಪದೇ ತಿಳಿಯಿರಿ !!
ಈ ಕುರಿತಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೂ ಕೂಡಾ ಸ್ಪಷ್ಟನೆ ನೀಡಿದ್ದಾರೆ. ಹೊಸದಾಗಿ ಡಿಎಲ್ ಹಾಗೂ ಆರ್‌ಸಿ ಪಡೆಯುವವರಿಗೆ ಮಾತ್ರ ಫೆಬ್ರವರಿ ನಂತರ ಹೊಸ ರೀತಿಯ ಸ್ಮಾರ್ಟ್ ಕಾರ್ಡ್ ಕೊಡ್ತೇವೆ ಎಂದಿದ್ದಾರೆ. ಇನ್ನು ಹಳೇ ಡಿಎಲ್‌ಗಳ ನವೀಕರಣ ಮಾಡುವ ವೇಳೆ ಹೊಸ ರೀತಿಯ ಸ್ಮಾರ್ಟ್ ಕಾರ್ಡ್‌ಗೆ ಬದಲಾವಣೆ ಮಾಡಿಕೊಡಲಾಗುತ್ತೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
