Siddaramaiah: ಮಂಗಳೂರಿನಲ್ಲಿ (Mangaluru) ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉಡುಪಿ – ದಕ್ಷಿಣ (Udupi-Dakshina Kannada) ಕನ್ನಡ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ ಎಂದರು. ಜೊತೆಗೆ ಹಿಂದಿನ ಬಿಜೆಪಿ (Bjp) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಉಡುಪಿ, ಮಂಗಳೂರು ಯಾವಾಗಲೂ ಪ್ರಥಮ, ದ್ವಿತೀಯ ಸ್ಥಾನದಲ್ಲಿ ಇರುತ್ತಿತ್ತು. ಈಗೇಕೆ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ಅತ್ಯಂತ ಹಿಂದುಳಿದ ಜಿಲ್ಲೆ ಚಿತ್ರದುರ್ಗ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವ ಹೊತ್ತಲ್ಲಿ ಅತ್ಯಂತ ಮುಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿಯಲು ಕಾರಣ ಏನು? ಡಿಡಿಪಿಐ ಆದವರು ಬಿಇಒ ಗಳನ್ನು ಈ ಬಗ್ಗೆ ಪ್ರಶ್ನಿಸಬೇಕು ಎಂದು ಖಡಕ್ ಆಗಿ ಹೇಳಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯ್ತಿ ಕಟ್ಟಡದಲ್ಲಿರುವ ಡಾ. ವಿ.ಎಸ್. ಆಚಾರ್ಯ ಸ್ಮಾರಕ ಸಭಾಂಗಣದಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ”ಕಾಂಗ್ರೆಸ್ (Congress) ಆಡಳಿತವಿದ್ದಾಗ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಕ್ಕೇ ಮುಂಚೂಣಿಯಲ್ಲಿದ್ದ ಉಡುಪಿ ಜಿಲ್ಲೆಯು ಬಿಜೆಪಿ ಆಡಳಿತದಲ್ಲಿ ಹಿನ್ನಡೆ ಕಂಡಿದ್ದು, ಸುಧಾರಿಸದಿದ್ದರೆ ಸಂಬಂಧಿತರನ್ನು ಅಮಾನತು ಮಾಡುವ ಎಚ್ಚರಿಕೆ ನೀಡಿದ್ದೇನೆ,” ಎಂದು ತಿಳಿಸಿದರು.
ಕಾಂಗ್ರೆಸ್, ಬಿಜೆಪಿ ಆಡಳಿತದ ಸಾಧನೆ ತುಲನೆ ಮಾಡಿದ ಸಿಎಂ
ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ 2014ರಲ್ಲಿ ಮೊದಲ ಸ್ಥಾನ, 2015-16ರಲ್ಲಿ ಎರಡನೇ ಸ್ಥಾನ, 2017ರಲ್ಲಿ ಮೊದಲ ಸ್ಥಾನದಲ್ಲಿತ್ತು. ಆದರೆ, 2022ರಲ್ಲಿ 16ನೇ ಹಾಗೂ 2023ರಲ್ಲಿ 13ನೇ ಸ್ಥಾನಕ್ಕಿಳಿದಿದೆ.
2015ರಲ್ಲಿ ಆರೋಗ್ಯ ಸೂಚ್ಯಂಕದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಇದೀಗ 2023ರಲ್ಲಿ 19ನೇ ಸ್ಥಾನದಲ್ಲಿದೆ.
ತಾಯಂದಿರ ಮರಣ 2015-16ರಲ್ಲಿ 1,000ಕ್ಕೆ 14 ಆಗಿದ್ದು, 2021-22ರಲ್ಲಿ 126 ಹಾಗೂ 2022-23ರಲ್ಲಿ 53ಕ್ಕೇರಿದೆ.
ಮಕ್ಕಳ ಸಾವು 2015-16ರಲ್ಲಿ 51 ಆಗಿದ್ದು, 2022-23ರಲ್ಲಿ 166ಕ್ಕೇರಿದೆ.
