Anna Bhagya scheme : ಅನ್ನಭಾಗ್ಯ ಯೋಜನೆಯಡಿ(Anna Bhagya scheme ) ಹೆಚ್ಚುವರಿ ಅಕ್ಕಿಯ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಯೋಜನೆಗೆ ಚಾಲನೆ ದೊರೆತಿದೆ. ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಿಗೆ ದುಡ್ಡು ಖಾತೆಗೆ ಹಾಕುವ ಪ್ರಕ್ರಿಯೆ ಶುರುವಾಗಿದ್ದು ಹಣ ಬಿಡುಗಡೆ ಆಗುವ ಹಣ ಫಲಾನುಭವಿಗಳ ಖಾತೆಗೆ ಸೇರುವ ದಿನಾಂಕ ಫಿಕ್ಸ್ ಆಗಿದೆ. ಇದು ನಾಳೆ, ಸೋಮವಾರದಿಂದ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ.
ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಸೋಮವಾರ ಸಂಜೆ ಚಾಲನೆ ನೀಡಲಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ನೇರ ಹಣ ಜಮೆ ಮಾಡಲಿದ್ದಾರೆ. ನಾಳೆಯಿಂದ 15 ದಿನಗಳಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರತೀ ಕೆ.ಜಿ. ಅಕ್ಕಿಗೆ 34 ರೂ.ಗಳಂತೆ ತಲಾ 5 ಕೆ.ಜಿ. ಅಕ್ಕಿಯ ಬದಲು 170 ರೂಪಾಯಿ ಜಮೆಯಾಗಲಿದೆ. ಅಂದರೆ ಇದು ಪ್ರತಿ ವ್ಯಕ್ತಿಗೆ. 5 ಜನರ ಕುಟುಂಬಕ್ಕೆ 850 ರೂಪಾಯಿ ಸಿಗಲಿದೆ.
ಜುಲೈ ತಿಂಗಳ ಪಡಿತರ ಪಡೆದವರಿಗೆ ಮಾತ್ರ ಈ ಮೊತ್ತ ಸಿಗಲಿದ್ದು, 1.28 ಕೋಟಿ ಕುಟುಂಬಗಳ 4.40 ಕೋಟಿ ಫಲಾನುವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಇದಕ್ಕಾಗಿ ಅಂದಾಜು 800 ಕೋಟಿ ರೂಪಾಯಿ ಬೇಕಿದ್ದು, ಆಧಾರ್ ಹಾಗೂ ಬ್ಯಾಂಕ್ ಖಾತೆ ಜೋಡಣೆ ಮಾಡಿಕೊಳ್ಳಲು ಫಲಾನುಭವಿಗಳಿಗೆ ಸರಕಾರ ಅಗತ್ಯ ಸಮಯಾವಕಾಶ ನೀಡಲಿದೆ.
ನಿನ್ನೆ ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪನವರು, ಜು.10 ರಂದು ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಡಿಬಿಟಿ ಗೆ ಚಾಲನೆ ನೀಡಲಿದ್ದಾರೆ. ಇದರಿಂದ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ 10 ಕೆ.ಜಿ ಅಕ್ಕಿ ಕೊಡುವುದು ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳ ಪೈಕಿ ಒಂದಾಗಿತ್ತು.
ಇದನ್ನೂ ಓದಿ: ಸಿದ್ದು ಬಜೆಟ್- ಯಾವ ಹೊಸ ವಾಹನಗಳ ಬೆಲೆ ಹೆಚ್ಚಾಗುತ್ತೆ ? ಕಾರು ಬೈಕ್ ರೇಟ್ ಏರಿಕೆ ? ಇದೀಗ ಬಂತು ಹೊಸ ಅಪ್ಡೇಟ್ !
