Karnataka Budget 2023: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು 14ನೇ ಬಾರಿಗೆ ಬಜೆಟ್ (Karnataka Budget 2023) ಮಂಡನೆಯಲ್ಲಿ, ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಸೇರಿದಂತೆ ಮೂಲಸೌಕರ್ಯಕ್ಕೂ ಒತ್ತು ನೀಡಿದ್ದಾರೆ.
ಮುಖ್ಯವಾಗಿ ಕರ್ನಾಟಕದ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೆ ಸುಲಭವಾಗಿ ಸಂಪರ್ಕಿಸಲು ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಏರ್‌ಸ್ಟ್ರಿಪ್ ಸ್ಥಾಪನೆ, ಹಾಗೂ ವಿಜಯಪುರ ವಿಮಾನನಿಲ್ದಾಣ ಈ ವರ್ಷವೇ ಆರಂಭ. ಬಂದರುಗಳ ಪ್ರಗತಿ ಸೇರಿದಂತೆ ಮೂಲಸೌಕರ್ಯ ಯೋಜನೆಯಡಿ ಹಲವು ಯೋಜನೆ ಘೋಷಿಸಲಾಗಿದೆ.
ವಿಮಾನನಿಲ್ದಾಣ ನಿರ್ಮಾಣ :
ಪ್ರವಾಸೋದ್ಯಮ ಮತ್ತು ಉದ್ಯಮ ವಲಯಗಳನ್ನು ಉತ್ತೇಜಿಸಲು ಹಾಗೂ ವಿಪತ್ತು ನಿರ್ವಹಣೆಯ ಸಮಯದಲ್ಲಿ ರಕ್ಷಣಾ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ವಿಮಾನನಿಲ್ದಾಣ (Airstrip) ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಇನ್ನು ವಿಜಯಪುರ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಈ ಸಾಲಿನಲ್ಲಿಯೇ ಪ್ರಾರಂಭಿಸಲಾಗುವುದು.
ಇನ್ನು ರಾಜ್ಯದಲ್ಲಿ ವಾಯುಯಾನ ಆಧಾರಿತ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಸಮಗ್ರ ನಾಗರಿಕ ವಿಮಾನಯಾನ ನೀತಿಯನ್ನು ರೂಪಿಸಲಾಗುವುದು. ಈ ನೀತಿಯಡಿ ಕೈಗೆಟಕುವ ಬೆಲೆಯಲ್ಲಿ ವಾಯುಯಾನ ಸಂಚಾರ, ಪ್ರವಾಸೋದ್ಯಮ, ಸರಕು ಸಾಗಣೆ ಹಾಗೂ ಕೈಗಾರಿಕೋದ್ಯಮಗಳ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಾಗುವುದು.
ರೈಲು ಜಾಲ ವಿಸ್ತರಣೆ:
ರೈಲ್ವೆ ಜಾಲದ ಸಾಂದ್ರತೆಯನ್ನು ಹೆಚ್ಚಿಸಿ, ಕರ್ನಾಟಕದ ಎಲ್ಲಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ, ಪ್ರಾದೇಶಿಕ ಅಸಮತೋಲನ ಕಡಿಮೆ ಮಾಡುವುದು, ಜನಸಾಮಾನ್ಯರ ಸುಗಮ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಅನುವು ಮಾಡಿಕೊಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸುಮಾರು 8,766 ಕೋಟಿ ರೂ.ಗಳ ರಾಜ್ಯದ ಹೂಡಿಕೆಯೊಂದಿಗೆ, 1,110 ಕಿ.ಮೀ. ಉದ್ದದ, ಒಂಬತ್ತು ರೈಲ್ವೆ ಯೋಜನಾ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು.
ಅದಲ್ಲದೆ ರಸ್ತೆ ಮಾರ್ಗದ ವಾಹನ ದಟ್ಟಣೆಯನ್ನು ನಿವಾರಿಸಿ ಸುಗಮ ರೈಲು ಸಂಚಾರಕ್ಕಾಗಿ ಅನುಮೋದಿತ ರೈಲ್ವೆ ಮೇಲ್ಸೇತುವೆ / ಕೆಳ ಸೇತುವೆಗಳ ನಿರ್ಮಾಣದ ಸುಮಾರು 803 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು.
ಅನಿಲ ವಿತರಣಾ ನೀತಿ:
ರಾಜ್ಯದಲ್ಲಿನ ನೈಸರ್ಗಿಕ ಅನಿಲ (Natural Gas) ವಿತರಣಾ ಜಾಲದ ವಿಸ್ತರಣೆಗೆ ಅವಕಾಶ ಮಾಡಿಕೊಡಲು, ರಾಜ್ಯಾದ್ಯಂತ ಏಕರೂಪದ ಅನುಮತಿ ಶುಲ್ಕ ಒಳಗೊಂಡಂತೆ, ನಗರ ಅನಿಲ ವಿತರಣಾ ನೀತಿಯನ್ನು (City Gas Distribution Policy) ರೂಪಿಸಲಾಗುವುದು.
ಕೇಣಿಯಲ್ಲಿ ಸರ್ವಋತು ಹಸಿರು ಬಂದರು:
ಬಂದರು ಅವಲಂಬಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸರ್ವ ಋತು ಡೀಪ್‌ವಾಟರ್ ಗ್ರೀನ್‌ಫೀಲ್ಡ್ ಬಂದರು ಅಭಿವೃದ್ಧಿ ಪಡಿಸಲಾಗುವುದು.
ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ಬಹುಪಯೋಗಿ ಬಂದರಿನ ಅಭಿವೃದ್ಧಿಗೆ ಈ ಸಾಲಿನಲ್ಲಿ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುವುದು.
ಮೀನುಗಾರಿಕಾ ದೋಣಿಗಳು ತಂಗುವ ಜೆಟ್ಟಿಗಳು ಹಾಗೂ ಬಂದರುಗಳಲ್ಲಿ ಹೂಳು ತೆಗೆಯುವುದು ಮತ್ತು ಮಲ್ಪೆ, ಹೊನ್ನಾವರ, ಭಟ್ಕಳ, ಕುಂದಾಪುರ ಮತ್ತು ಬೇಲೆಕೇರಿ ಬಂದರುಗಳಲ್ಲಿ ಎರಡು ವರ್ಷಗಳಿಗೊಮ್ಮೆ ಹೂಳೆತ್ತುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಇನ್ನು ರಾಜ್ಯದ ಕಿರು ಬಂದರುಗಳ ವಾಣಿಜ್ಯೀಕರಣ ಮತ್ತು ಸುಸ್ಥಿರ ಕಾರ್ಯನಿರ್ವಹಣೆಗೆ ಯೋಜನೆಯನ್ನು ರೂಪಿಸಲಾಗುವುದು.
ನೈಸರ್ಗಿಕ ಮೀನುಗಾರಿಕಾ ಬಂದರುಗಳನ್ನು ಸುಸ್ಥಿತಿಯಲ್ಲಿಡಲು ಸಮಗ್ರ ಕರಾವಳಿ ನಿರ್ವಹಣಾ ಸಮಿತಿಯ ಸಬಲೀಕರಣ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.
