Karnataka Budget 2023: ಈ ಬಾರಿ ಬಜೆಟ್‌ನಲ್ಲಿ (Karnataka Budget 2023) ವಿದ್ಯಾರ್ಥಿಗಳಿಗೆ ಸಹಾಯವಾಗುವ ರೀತಿಯಲ್ಲಿ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ಹಲವಾರು ಕೊಡುಗೆ ನೀಡಲಾಗಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಕಾಪಾಡುವ ದೃಷ್ಟಿಯಿಂದ ಈ ಹಿಂದೆ ಜಾರಿಯಲ್ಲಿದ್ದ ಯೋಜನೆಯನ್ನು ಮುಂದುವರೆಸುವುದಾಗಿ ಘೋಷಿಸಲಾಗಿದೆ. ಇನ್ಮುಂದೆ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೋಳಿ ಮೊಟ್ಟೆ, ಚಿಕ್ಕಿ, ಬಾಳೆ ಹಣ್ಣು ಸಿಗಲಿದೆ.
ಒಂದರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ, ಚಿಕ್ಕಿ ಅಥವಾ ಬಾಳೆಹಣ್ಣನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಅದನ್ನು ಎರಡು ದಿನ ನೀಡುವುದಾಗಿ ಘೋಷಣೆ ಮಾಡಲಾಗಿದೆ. 1 ರಿಂದ 10 ನೇ ತರಗತಿಯವರೆಗೂ ಈ ಸೌಲಭ್ಯ ಸಿಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿಯ 60 ಲಕ್ಷ ವಿದ್ಯಾರ್ಥಿಗಳಿಗೆ 280 ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಬಾರಿ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣನ್ನು ವಾರದಲ್ಲಿ ಎರಡು ದಿನ ವಿತರಿಸಲಾಗುವುದು ಎಂದು ಘೋಷಿಸಿದ್ದಾರೆ.
