BS Yeddyurappa: ವಿಧಾನಸಭೆ ಚುನಾವಣೆ ಮುಗಿದು ಕೈ ಪಾಳಯ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದು ಜನರಿಗೆ ನೀಡಿದ್ದ ಭರವಸೆ ಅನುಸಾರ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ. ಇಷ್ಟೆಲ್ಲಾ ನಡೆದರೂ ಕೂಡ ಕಮಲ ಪಾಳಯದಲ್ಲಿ ಮಾತ್ರ ವಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ಮಾತ್ರ ಹೈಕಮಾಂಡ್ ಗೆ ದೊಡ್ದ ತಲೆನೋವಾಗಿ ಪರಿಣಮಿಸಿದೆ.
ಈ ನಡುವೆ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜೀನಾಮೆ ಕೊಟ್ಟೆ ಬಿಟ್ಟರು ಅಂತ ಸುದ್ದಿ ಹರಡಿ, ಆ ಬಳಿಕ ಅಧ್ಯಕ್ಷ ನಳೀನ್ ಅವರೇ ಈ ಕುರಿತು ಸ್ಪಷ್ಟನೆ ನೀಡಿದ್ದರು. ಸದ್ಯ, ನಳೀನ್ ಕುಮಾರ್ ಅವರ ಅಧಿಕಾರವಧಿ ಮುಗಿದಿದ್ದು, ತುರ್ತಾಗಿ ನೂತನ ಅಧ್ಯಕ್ಷ ನೇಮಕವಾಗಬೇಕಾದ ಅನಿವಾರ್ಯತೆ ಎದುರಾಗಿದೆ. ನೂತನ ಅಧ್ಯಕ್ಷರ ಸ್ಥಾನವನ್ನೂ ತುಂಬಲು ಈಗಾಗಲೇ ಅನೇಕ ಹೆಸರುಗಳು ಕೇಳಿ ಬರುತ್ತಿದೆ. ಈ ನಡುವೆ ಹೊಸ ಹೆಸರೊಂದು ಮುನ್ನಲೆಗೆ ಬಂದಿದೆ. ಬಿಜೆಪಿಯ ರಾಷ್ಟ್ರ ಅಧ್ಯಕ್ಷರ ಸ್ಥಾನಕ್ಕೆ ಹಲವು ಮಂದಿ ನಾಯಕರಗಳು ಕಂಡು ನೆಟ್ಟು ಕೂತಿದ್ದಾರೆ. ಲಿಂಗಾಯಿತರ ಪ್ರಬಲ ನಾಯಕ ಸೋಮಣ್ಣ ಬಹಿರಂಗವಾಗಿ ತಾವು ಸ್ಪರ್ಧಾ ಆಕಾಂಕ್ಷಿ ಎಂದಿದ್ದರು. ಇದೀಗ ಅವರ ಬಗ್ಗೆ ಇನ್ನೋರ್ವ ಅಭ್ಯರ್ಥಿ ಎದ್ದು ನಿಂತಿದ್ದು ವಿಶೇಷವೆಂದರೆ ಅವರು ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಹೌದು,ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಂಸದೆ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡಿರುವ ಬಿಜೆಪಿ ಸೋಲಿಗೆ ಕಾರಣವೇನು ಎಂದು ಪರಾಮರ್ಶೆ ಮಾಡುತ್ತಿದೆ. ಈ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೆ ಪಕ್ಷದ ಸೋಲಿಗೆ ಕಾರಣ ಎಂಬುದು ಕೆಲ ಬಲ್ಲವರ ವಾದ. ಇದರ ಜೊತೆಗೆ,ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದಿದ್ದು, ಅಧಿವೇಶನವೇ ಆರಂಭವಾದರೂ ಕೂಡ ವಿಪಕ್ಷ ನಾಯಕನ ಆಯ್ಕೆಯೇ ಇನ್ನೂ ಮುಗಿದಿಲ್ಲ ಎಂಬುದು ಉಳಿದ ಪಕ್ಷಗಳ ಟೀಕಾ ಪ್ರಹಾರಕ್ಕೆ ಕಾರಣವಾಗಿದೆ.
ಇದರ ಜೊತೆಗೆ ರಾಜ್ಯಾಧ್ಯಕ್ಷ ಸ್ಥಾನವೂ ಖಾಲಿ ಉಳಿದಿದ್ದು, ಇದಕ್ಕೆ ಭರ್ತಿ ಕಾರ್ಯ ಶೀಘ್ರವೇ ಮಾಡಬೇಕಾಗಿದೆ. ಇಲ್ಲಿ ನಳೀನ್ ಕುಮಾರ್ ಕಟೀಲ್ ಅವರನ್ನೇ ಮರು ನೇಮಕ ಮಾಡುವುದು ಅನುಮಾನವೇ ಸರಿ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಹಲವಾರು ಹಿರಿಯ ನಾಯಕರ ಹೆಸರುಗಳು ಕೇಳಿ ಬರುತ್ತಿದ್ದು, ಅವುಗಳಲ್ಲಿ ಕೆಲವು ಮುಂಚೂಣಿಯಲ್ಲಿದೆ ಆರ್, ಅಶೋಕ್, ಬಸವರಾಜ ಬೊಮ್ಮಾಯಿ, ಸಿಟಿ ರವಿ, ಶೋಭಾ ಕರಂದ್ಲಾಕೆ, ಬಸನಗೌಡ ಪಾಟೀಲ್ ಯತ್ನಾಳ್, ಬಿವೈ ವಿಜಯೇಂದ್ರ, ವಿ ಸೋಮಣ್ಣ, ಮಾಜಿ ಸಚಿವ ಸುನೀಲ್ ಕುಮಾರ್ ಹೀಗೆ ಅನೇಕ ಹೆಸರುಗಳ ನಡುವೆ ಯಡಿಯೂರಪ್ಪ ಅವರು ಕೂಡ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಹೈಕಮಾಂಡ್ ಗೆ ಬೇಡಿಕೆ ಇಟ್ಟಿದ್ದು, ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಬಿಎಸ್ ಯಡಿಯೂರಪ್ಪನವರ ಮಾತನ್ನು ಒಪ್ಪಿಕೊಳ್ಳುವುದೇ ಎಂದು ಕಾದು ನೋಡಬೇಕಾಗಿದೆ.
ಕರ್ನಾಟಕ ವಿರೋಧ ಪಕ್ಷದ ನಾಯಕನಾಗಿ ಲಿಂಗಾಯತರಿಗೆ ಅವಕಾಶ ನೀಡಿದರೆ, ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕೆಂದು ಒತ್ತಾಯಿಸಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರನ್ನು ನೇಮಿಸುವಂತೆ ಬಿಎಸ್ ಯಡಿಯೂರಪ್ಪ ಅವರು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗೆ ಮಹಿಳಾ ಅಭ್ಯರ್ಥಿಯನ್ನು ಘೋಷಿಸಲು ಕೂಡಾ ಒಂದು ಪ್ರಮುಖ ಕಾರಣವಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಕರ್ನಾಟಕದ ಮಹಿಳೆಯರ ಮನ ಗೆದ್ದು, ಚುನಾವಣೆಯಲ್ಲಿ ಕೂಡ ಗೆದ್ದು ಖುಷಿಯಿಂದ ಆಡಳಿತ ನಡೆಸುತ್ತಿದೆ. ಹೆಚ್ಚು ಕಮ್ಮಿ ಮಹಿಳೆಯರಿಗೆ ತಾನು ಕೊಟ್ಟ ಗ್ಯಾರಂಟಿಗಳನ್ನು ಪೂರೈಸಲು ಕಾಂಗ್ರೆಸ್ ಪಕ್ಷವು ಕಟ್ಟಿಬದ್ಧವಾಗಿರುವ ರೀತಿ ಕಾಣಿಸುತ್ತಿದೆ. ಈಗಾಗಲೇ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಲಾಭವನ್ನು ಕರ್ನಾಟಕದ ಎಲ್ಲಾ ವರ್ಗಗಳ, ಎಲ್ಲಾ ಪ್ರಾಯಗಳ ಹಂಗಿಲ್ಲದೆ ಮಹಿಳಾ ಮಣಿಗಳು ಅನುಭವಿಸುತ್ತಿದ್ದಾರೆ. ಅದರ ಜೊತೆ ಉಚಿತ ವಿದ್ಯುತ್ ನೀಡುವ ಯೋಜನೆ ಇನ್ನೇನು ಕಾರ್ಯರೂಪಕ್ಕೆ ಬರಲಿದೆ. ಮನೆ ಒಡತಿಗೆ 2,000 ರೂಪಾಯಿ ನೀಡುವ ಗ್ಯಾರಂಟಿ ಯೋಜನೆ ಕೂಡ ಸನಿಹದಲ್ಲಿದೆ. ಹೀಗೆ ಹೋಲ್ ಸೇಲ್ ಆಗಿ ಸ್ತ್ರೀಯರ ಮನಸ್ಸು ಗೆದ್ದಿರುವ ಕಾಂಗ್ರೆಸ್ ಪಕ್ಷದ ಎದುರಿಗೆ ರಾಜ್ಯದ ಬಲಿಷ್ಠ ಸಮುದಾಯ ಒಂದರ ಬಲಿಷ್ಠ ನಾಯಕಿ ಒಬ್ಬರನ್ನು ತಂದು ನಿಲ್ಲಿಸುವ ಪ್ಲಾನ್ ಯಡಿಯೂರಪ್ಪನವರದು. ಯಡಿಯೂರಪ್ಪ ಬಣದ ಶೋಭಾ ಕರಂದ್ಲಾಜೆಯವರು ಬಿಜೆಪಿ ರಾಜ್ಯಾಧ್ಯಕ್ಷರಾದರೆ ಪಕ್ಷದ ಮೇಲೆ ಯಡಿಯೂರಪ್ಪನವರ ಹಿಡಿತ ಅನಿಯಮಿತವಾಗಿ ಮುಂದುವರೆಯುತ್ತದೆ. ಜೊತೆಗೆ ಲಿಂಗಾಯಿತ ವರ್ಗ ಮತ್ತು ಒಕ್ಕಲಿಗ ವರ್ಗಗಳು ಜೊತೆಗೆ ಮಹಿಳೆಯರು ಬಿಜೆಪಿ ಕಡೆ ವಾಲುವಂತೆ ಮಾಡಬಹುದು ಎನ್ನುವುದು ರಾಜ್ಯ ಸುಪ್ರೀಂ ನಾಯಕ ಯಡಿಯೂರಪ್ಪನವರ ಮಾಸ್ಟರ್ ಪ್ಲಾನ್.
ಹೀಗಾಗಿ ಈಗ ಮ್ಯಾಟರ್ ಹೈಕಮಾಂಡ್ ಅಂಗಳ ತಲುಪಿದೆ. ಹೈಕಮಾಂಡ್ ಈ ಎರಡು ಹುದ್ದೆಗಳಿಗೆ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಾಗಿದೆ.
