Shakti Yojana Effect: ಶಕ್ತಿ ಯೋಜನೆಯ ಹವಾ ಕೆಲವು ಕಡೆ ಬಹಳ ಜೋರಾಗಿಯೇ (Shakti Yojana Effect) ಇದೆ. ಇದೀಗ ರಾಯಚೂರಿನ ಬಸ್ ಕಂಡಕ್ಟರ್ ಖುಷಿಯಲ್ಲಿ ಸಿಂಗರ್ ಆಗೇ ಬಿಟ್ಟಿದ್ದಾನೆ. ಹೌದು, ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸ್ಸಿನಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು.., ಅಕ್ಕಾ ನೀ, ತಂಗೀ.. ನೀ ಆಧಾರ್ ತೋರಿಸಿದ್ರೆ ಮಾತ್ರ ಉಚಿತ ಟಿಕೆಟ್ ಕೊಡ್ತೀನಿ ನಾನು, ಇದು ಪಕ್ಕಾ ಅಕ್ಕಾ, ನಿಜ ತಾನೆ, ಹೇಳಕ್ಕ…ʼ ಎಂದು ಪ್ರಾಸ ಹಾಡು ಹಾಡಿದ್ದಾನೆ.
ರಾಯಚೂರು ಡಿಪೋ ಬಸ್ ಕಂಡಕ್ಟರ್ ಗುರು ದೇವರಮಣಿ ಎಂಬಾತ ನೂಕು ನುಗ್ಗಲು ಇದ್ದ ಬಸ್‌ನಲ್ಲೂ ಕೂಲ್ ಆಗಿ ಡಾ.ರಾಜಕುಮಾರ್ ಸಿನಿಮಾಗಳ ಹಾಡು ಹೇಳುತ್ತಾ ಟೆನ್ಷನ್ ರಿಲೀಫ್ ಮಾಡಿಕೊಂಡು ಪ್ರಯಾಣಿಕರಿಗೆ ಶಕ್ತಿ ಯೋಜನೆ ಬಗ್ಗೆ ಅರಿವು ಮೂಡಿಸುತ್ತ, ಟಿಕೆಟ್ ಕೊಡುತ್ತಿದ್ದಾರೆ.
ಇದೀಗ ಹಾಡು ಹೇಳಿಕೊಂಡು ಮಹಿಳೆಯರಿಗೆ ದೇವರಮಣಿಯವರು ಟಿಕೆಟ್ ನೀಡುತ್ತಿರುವುದು, ಶಕ್ತಿ ಯೋಜನೆ ಬಗ್ಗೆ ಅರಿವು ಮೂಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಈ ಪ್ರದೇಶದ ಖ್ಯಾತ ಬರಹಗಾರರೂ ಆಗಿರುವ ಡಾ.ಶರದ್ ತಂಗಾ ಅವರೂ ಟ್ವೀಟ್ ಮಾಡಿದ್ದು, ಜನರನ್ನು ಸಂಪರ್ಕಿಸಲು, ಸಂದೇಶ ನೀಡಲು ಮನರಂಜನೆ ಎಂದಿಗೂ ವಿಫಲವಾಗುವುದಿಲ್ಲ. ಕೆಕೆಆರ್’ಟಿಸಿಯಿಂದ ಮೆಚ್ಚುಗೆ ಪಡೆಯಲು ಈ ವ್ಯಕ್ತಿ ಅರ್ಹರಾಗಿದ್ದಾರೆಂದು ಹೇಳಿಕೊಂಡಿದ್ದಾರೆ.
ಜೊತೆಗೆ ಈ ವಿಡಿಯೋದಲ್ಲಿ ಬಸ್ಸಿನಲ್ಲಿರುವ ಪ್ರಯಾಣಿಕರು ಕೂಡ ಖುಷಿಗೊಂಡಿದ್ದು ಸುಖಕರವಾಗಿ ಪ್ರಯಾಣ ಮುಂದುವರೆಸಿದ್ದಾರೆ.
