Belagavi: ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ ಹಣ ಸಿಗುತ್ತಿದೆ. ಆದರೆ ಕೆಲವು ತಿಂಗಳಿನಿಂದ ಯಜಮಾನೀಯರ ಖಾತೆಗೆ ಹಣ ಜಮೆ ಆಗಿಲ್ಲ. ಈ ವಿಚಾರವಾಗಿ ಬೆಳಗಾವಿಯ ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷಗಳು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿವೆ. ಈ ವೇಳೆ ವಿಪಕ್ಷಗಳ ಪ್ರಶ್ನೆಗೆ ಹೆದರಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉತ್ತರಿಸಲಾಗದೆ ಕಣ್ಣೀರು ಹಾಕಿದ್ದಾರೆ.
ಹೌದು, ಇಂದಿನ ಕಲಾಪ ಆರಂಭವಾಗುತ್ತಿದ್ದಂತೆಯೇ ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಉಳಿದಿರುವ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ಸದಸ್ಯರು ಪ್ರಶ್ನೆಗಳ ಸುರಿಮಳೆಗೈದರು. ಜೂನ್ ಮತ್ತು ಜುಲೈ ತಿಂಗಳ ಹಣ ಇನ್ನೂ ಫಲಾನುಭವಿಗಳಿಗೆ ತಲುಪಿಲ್ಲ, ಸರ್ಕಾರ ದಿವಾಳಿಯಾಗಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ವಿಪಕ್ಷಗಳ ಸತತ ವಾಗ್ದಾಳಿಯಿಂದ ನೊಂದ ಸಚಿವೆ ಹೆಬ್ಬಾಳ್ಕರ್ ಒಂದು ಹಂತದಲ್ಲಿ ಭಾವುಕರಾದರು. ಮಾಹಿತಿ ವ್ಯತ್ಯಾಸವಾಗಿದ್ದಕ್ಕೆ ನಾನು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ. ಆದರೂ ನೀವು ನನ್ನನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದೀರಿ. ನಾನು ಒಬ್ಬ ಮಹಿಳೆ ಎಂಬ ಕಾರಣಕ್ಕೆ ಈ ರೀತಿ ಟಾರ್ಗೆಟ್ ಮಾಡುತ್ತಿದ್ದೀರಾ? ಒಬ್ಬ ಮಹಿಳಾ ಸಚಿವೆ ಎಂಬ ಕಾರಣಕ್ಕೆ ಈ ಮಟ್ಟಕ್ಕೆ ಇಳಿಯುತ್ತಿದ್ದೀರಾ ಎಂದು ಪ್ರಶ್ನಿಸುವ ಮೂಲಕ ವಿಪಕ್ಷಗಳ ನಡೆಗೆ ಕಣ್ಣೀರು ಹಾಕಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಾನು ಮಹಿಳೆ ಎಂದು ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶೋಕ್, ಇಲ್ಲಿ ವಿಷಯಾಂತರ ಮಾಡಬೇಡಿ ಎಂದು ತಿರುಗೇಟು ನೀಡಿದರು. ಸಂವಿಧಾನದ ರೂಲ್‌ಬುಕ್‌ನಲ್ಲಿ ಅಥವಾ ಸದನದಲ್ಲಿ ಮಹಿಳೆ ಅಥವಾ ಪುರುಷ ಎಂಬ ಭೇದವಿಲ್ಲ. ಇಲ್ಲಿ ಇರುವುದು ಕೇವಲ ಮಂತ್ರಿ ಎಂಬ ಸ್ಥಾನ ಮಾತ್ರ. ನೀವು ಮಂತ್ರಿಯಾಗಿ ಜವಾಬ್ದಾರಿಯುತ ಉತ್ತರ ನೀಡಬೇಕು. ಅದನ್ನು ಬಿಟ್ಟು ಮಹಿಳಾ ಕಾರ್ಡ್ ಬಳಸಬೇಡಿ ಎಂದು ತಾಕೀತು ಮಾಡಿದರು.
