Prajwal Revanna: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿಗಳಿಗೆ ಎಸ್‌ಐಟಿ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ಹಾಗೂ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಎ1 ಆರೋಪಿ ಎಚ್‌ಡಿ ರೇವಣ್ಣ ಅವರು ನಾಳೆ ಮೇ.02 ರಂದು ಹಾಜರಾಗಲಿದ್ದಾರೆ. ಎ2 ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ದಿಢೀರ್ ಸಾಮಾಜಿಕ ಜಾಲತಾಣದಲ್ಲಿ ಮೊದಲ ಬಾರಿಗೆ ಎಸ್‌ಐಟಿ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲ. ಆದ ಕಾರಣ ನಾನು ನನ್ನ ವಕೀಲರ ಮೂಲಕ ಸಿಐಡಿ ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬಲಿದೆ ” ಎಂದು ಪ್ರಜ್ವಲ್ ರೇವಣ್ಣ ಬರೆದುಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ವಕೀಲರು ಮಾಧ್ಯಮವೊಂದಕ್ಕೆ ಹೇಳಿರುವ ಪ್ರಕಾರ, ಪ್ರಜ್ವಲ್ ವಿದೇಶದಲ್ಲಿರುವುದರಿಂದ ಕಾಲಾವಕಾಶ ಕೇಳಿದ್ದಾರೆ. ಎಸ್‌ಐಟಿಗೆ ಪ್ರಜ್ವಲ್ ಪರವಾಗಿ ಕಾಲಾವಕಾಶ ಕೇಳಿದ್ದೇನೆ. ಸಿಐಡಿ ಕಚೇರಿಗೆ ತೆರಳಿ 7 ದಿನ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದೇನೆ. ತನಿಖಾಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏಳು ದಿನ ಸಮಯ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆಂದು ವರದಿಯಾಗಿದೆ.
