Siddaramaiah : ರಾಜ್ಯದಲ್ಲಿ ಚುನಾವಣೆ ಘೋಷಣೆ ಆಗುವ ಮೊದಲಿಂದಲೂ ಮುಂದಿನ ಸಿಎಂ ಕುರಿತ ವಿಚಾರ ಚರ್ಚೆಗೆ ಬರುತ್ತಲೇ ಇದೆ. ಅದರಲ್ಲೂ ಕಾಂಗ್ರೆಸ್ನಲ್ಲಿ ತುಸು ಹೆಚ್ಚೆನ್ನಬಹುದು. ಅಂದಹಾಗೆ ಸಿಎಂ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ( Siddaramaiah) ನಡುವೆ ಪೈಪೋಟಿ ಇರೋದು ಗೊತ್ತಿರುವ ವಿಚಾರ. ಚುನಾವಣೆ ಪ್ರಚಾರ (Election Campaign) ವೇಳೆ ಇಬ್ಬರು ನಾಯಕರು ತಾವೇ ಸಿಎಂ ಸ್ಥಾನದ ಆಕಾಂಕ್ಷಿಗಳು ಎಂದು ಹೇಳುವುದನ್ನು ನಾವು ನೋಡಿದ್ದೇವೆ. ಆದರೆ ಇದೀಗ ಸಿದ್ದರಾಮಯ್ಯ ಸಿಡಿಸಿರುವ ಈ ಸಿಎಂ ಬಾಂಬ್ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಹೌದು, ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ನಾನು ಮತ್ತು ಡಿಕೆ ಶಿವಕುಮಾರ್ ಸಹ ಸಿಎಂ ಸ್ಥಾನದ ಆಕಾಂಕ್ಷಿಗಳು. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಿಲ್ಲ ಎಂದು ಹೇಳಿದ್ದರು.
ಈ ವಿಚಾರ ರಾಜ್ಯಾದ್ಯಂತ ಅಚ್ಚರಿ ಹಾಗೂ ಚರ್ಚೆಗೆ ಕಾರಣವಾಗುತ್ತಿದ್ದಂತೆ, ಸಿದ್ಧು ತಮ್ಮ ಹೇಳಿಕೆಯ ಕುರಿತಂತೆ ಸ್ಪಷ್ಟೀಕರಣ ನೀಡಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ಸಿಎಂ ಅಭ್ಯರ್ಥಿ ಎಂದು ಹೇಳಿಕೆ ನೀಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಸಿಎಂ ಆಯ್ಕೆ ಆಗಲಿದೆ ಎಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಮಾಧ್ಯಮ ವರದಿಯ ಲೇಖನವನ್ನು ಹಂಚಿಕೊಂಡಿದ್ದಾರೆ.
ಅಲ್ಲದೆ ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಾನು ಆಡದ ಮಾತುಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿಯೊಂದನ್ನು ಪ್ರಕಟಿಸಿದೆ. ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದ್ದಾಗಿದೆ. ಎನ್.ಡಿ ಟಿವಿ ತಕ್ಷಣ ಈ ಬರಹವನ್ನು ಅಳಿಸಿ ಹಾಕಿ ತಿದ್ದುಪಡಿ ಪ್ರಕಟಿಸಬೇಕು ಎಂದು ಒತ್ತಾಯಿಸುತ್ತೇನೆ. ನಮ್ಮ ಪಕ್ಷದ ಮುಂದಿನ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ಕೂಡಿ ಆಯ್ಕೆ ಮಾಡಲಿದೆ ಎನ್ನುವುದನ್ನು ನೂರು ಸಲ ಹೇಳಿದ್ದೇನೆ. ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ವಿರೋಧ ಪಕ್ಷಗಳ ಹುನ್ನಾರಕ್ಕೆ ಮಾಧ್ಯಮಗಳು ಆಯುಧವಾಗಿ ಬಳಕೆಯಾಗಬಾರದು ಎಂದಿದ್ದಾರೆ.
ಇನ್ನು ಸಂದರ್ಶನದಲ್ಲಿ ಕೋಲಾರ ಸ್ಪರ್ಧೆ ಬಗ್ಗೆ ಕೇಳಿದಾಗ, ಹೈಕಮಾಂಡ್ ಒಪ್ಪಿದರೆ ಮಾತ್ರ ಕೋಲಾರದಿಂದಲೂ ಸ್ಪರ್ಧಿಸುತ್ತೇನೆ. ನನಗೆ ಈಗಾಗಲೇ ವರುಣದಿಂದ ಟಿಕೆಟ್ ದೊರಕಿದ್ದು, ವರುಣದಿಂದಲೇ ಸ್ಪರ್ಧಿಸಲಿದ್ದೇನೆ. ಆದರೆ, ಕೋಲಾರದಲ್ಲಿ ಸ್ಪರ್ಧಿಸಿದರೆ ಸುತ್ತಲಿನ 20 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ನೆರವಾಗಲಿದೆ ಎಂದು ಸ್ಥಳೀಯ ನಾಯಕರಿಂದ ಒತ್ತಾಯವಿದೆ. ಹೀಗಾಗಿ, ಈ ವಿಚಾರವನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಹೈಕಮಾಂಡ್ ಒಪ್ಪಿದರೆ ಮಾತ್ರ ಕೋಲಾರದಿಂದ ಸ್ಪರ್ಧಿಸುವೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷವು ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸುವುದಿಲ್ಲ. ಅದರ ಅಗತ್ಯವೂ ಇರುವುದಿಲ್ಲ. ಏಕೆಂದರೆ, ಕಾಂಗ್ರೆಸ್ ಸಂಪೂರ್ಣ ಸ್ವ ಸಾಮರ್ಥ್ಯದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ.
