ಕಲಿಕೆಗೆ ವಯಸ್ಸಿನ ಹಂಗಿಲ್ಲ ಅಂತಾರೆ. ಅಂತೆಯೇ ಈ ಮಾತು ಅದೆಷ್ಟೋ ಕಡೆಗಳಲ್ಲಿ ಸಾಬೀತು ಕೂಡ ಆಗಿದೆ. ಇಳಿವಯಸ್ಸಿನಲ್ಲೂ ಪರೀಕ್ಷೆ ಬರೆದು ಪಾಸ್ ಮಾಡಿ ಹಲವರಿಗೆ ಮಾದರಿಯಾದವರು ನಮ್ಮ ನಡುವೆ ಇದ್ದಾರೆ. ಹೀಗಿರುವಾಗ ಇದೀಗ ಒಡಿಶಾದ 58 ವರ್ಷದ ಶಾಸಕರೊಬ್ಬರು 10ನೇ ತರಗತಿ ಪರೀಕ್ಷೆ ಬರೆದು ಸುದ್ದಿಯಾಗಿದ್ದಾರೆ.
ಅಂಗದ ಕನ್ಹರ್ ಎಂಬವರೇ ಪರೀಕ್ಷೆ ಬರೆದ ಫುಲ್ಭಾನಿಯ ಶಾಸಕ. ಇವರು ತಮ್ಮ 58ನೇ ವಯಸ್ಸಲ್ಲಿ ಪರೀಕ್ಷೆ ಬರೆಯುವ ಮೂಲಕ ಓದು ಅರ್ಧಕ್ಕೆ ನಿಲ್ಲಿಸಿದವರಿಗೆ ಮಾದರಿಯಾಗಿದ್ದಾರೆ. ಒಡಿಶಾದಲ್ಲಿ ಶುಕ್ರವಾರದಿಂದ 10ನೇ ತರಗತಿ ಅಥವಾ ಪ್ರೌಢಶಾಲಾ ಪ್ರಮಾಣಪತ್ರ ಅಂತಿಮ ಪರೀಕ್ಷೆಗಳು ಆರಂಭವಾಗಿವೆ. ಆಡಳಿತಾರೂಢ ಬಿಜೆಡಿ ಶಾಸಕ ಅಂಗದ ಕನ್ಹರ್ ವಿದ್ಯಾರ್ಥಿಗಳಂತೆ ತಾವು ಕೂಡ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾರೆ.
ಕಂಧಮಾಲ್ ಜಿಲ್ಲೆಯ ಪಟಿಭಾರಿ ಗ್ರಾಮದಲ್ಲಿ ನಡೆದ ಕೇಂದ್ರದಲ್ಲಿ ಶಾಸಕರು ಬೆಳಗ್ಗೆ 8 ಗಂಟೆಗೆ ಪರೀಕ್ಷೆಗೆ ಕುಳಿತಿದ್ದಾರೆ. 1978ರಲ್ಲಿ ಓದು ಅರ್ಧಕ್ಕೆ ನಿಲ್ಲಿಸಿದ್ದು, ದಶಕಗಳ ಬಳಿಕ ಕ್ರಮ ಸಂಖ್ಯೆಗೆ ಅನುಗುಣವಾಗಿ ಪರೀಕ್ಷೆ ಬರೆದು ಮುಗಿಸಿದ್ದಾರೆ. ಇವರನ್ನೇ ಮಾದರಿಯಾಗಿಸಿಕೊಂಡ ಕೆಲ ಸ್ನೇಹಿತರು ಮತ್ತು ಸ್ಥಳೀಯ ಸರ್‍ಪಂಚ್‍ಗಳೂ ಕೂಡಾ ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ.
