Madhu Bangarappa: ಕರ್ನಾಟಕದ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ(Madhu Bangarappa)ಅವರಿಗೆ ಸ್ಪಷ್ಟವಾದ ಕನ್ನಡ ಬರುವುದಿಲ್ಲ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಒಬ್ಬರು ಶಿಕ್ಷಣ ಸಚಿವರಾಗಿ ಅವರಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುವುದಿಲ್ಲ ಎಂದರೆ ಅದು ನಾಚಿಕೆಗೇಡಿನ ಸಂಗತಿಯೂ ಹೌದು. ನಿಮಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಕೇಳಿದರೆ ನರೇಂದ್ರ ಮೋದಿಯವರಿಗೆ ಕನ್ನಡ ಮಾತನಾಡಲು ಬರುತ್ತದೆ ಎಂದು ಅಸಂಬದ್ಧ ಪ್ರಶ್ನೆ ಕೇಳುವ ಶಿಕ್ಷಣ ಸಚಿವರು ನಮಗಿರುವುದು ದುರ್ದೈವವೇ ಸರಿ. ಇದೀಗ ಈ ಶಿಕ್ಷಣ ಸಚಿವರಿಗೆ ಇನ್ನೂ ನಾಚಿಕೆಯಾಗುವಂತಹ ಒಂದು ಪ್ರಸಂಗ ನಡೆದಿದೆ. ವಿದ್ಯಾರ್ಥಿಯೊಬ್ಬ ನೇರವಾಗಿ ಮಧು ಬಂಗಾರಪ್ಪನವರಿಗೆ ಕನ್ನಡ ಬರುವುದಿಲ್ಲ ಎಂದು ಹೇಳಿ ಮರ್ಯಾದೆ ತೆಗೆದಿದ್ದಾನೆ.
ಹೌದು, ನೀಟ್ ಕೋಚಿಂಗ್ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ, ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯ ಹಂಚಿಕೊಳ್ಳುವ ವೇಳೆ ವಿದ್ಯಾರ್ಥಿಯೋರ್ವ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಕನ್ನಡ ಸರಿಯಾಗಿ ಬರಲ್ಲ ಎಂದು ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಸಚಿವ ಮಧು ಬಂಗಾರಪ್ಪ ಗರಂ ಆಗಿದ್ದು, ಯಾರೋ ಅದು ಹಾಗೆ ಹೇಳಿದ್ದು ಎಂದು ಆಕ್ರೋಶಗೊಂಡಿದ್ದಾರೆ.
ನಾನು ಕನ್ನಡನಾ ಅಥವಾ ಉರ್ದು ಮಾತನಾಡುತ್ತಿದ್ದೆನಾ? ವಿದ್ಯಾರ್ಥಿಗೆ ಹಾಗೆ ಯಾರು ಹೇಳಿದ್ದು ಮಾಹಿತಿ ತೆಗೆದುಕೊಳ್ಳಿ. ಆತನಿಗೆ ಸುಮ್ಮನೆ ಬಿಡಬೇಡಿ, ಏನು ಅಂತ ಕೇಳಿ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಗೆ ಸಚಿವ ಮಧು ಬಂಗಾರಪ್ಪ ಸೂಚನೆ ನೀಡಿದ್ದಾರೆ. ನೀಟ್ ಕೋಚಿಂಗ್ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂವಾದದಲ್ಲಿ ಅಭಿಪ್ರಾಯ ಸಂಗ್ರಹ ವೇಳೆ ವಿದ್ಯಾರ್ಥಿ ಒಬ್ಬ ಈ ಹೇಳಿಕೆ ನೀಡಿದ್ದ ಎನ್ನಲಾಗಿದೆ.
