H D Kumaraswamy: ರಾಜ್ಯ ಸರಕಾರ ದುಡ್ಡು ತೆಗೆದುಕೊಂಡು ಕೆಲಸ ನೀಡುವುದನ್ನು ನಿಲ್ಲಿಸಿದಲ್ಲಿ ಮಾತ್ರ ತುಂಗಭದ್ರಾ(TB Dam) ಜಲಾಶಯದಲ್ಲಿ ಕ್ರಸ್ಟ್ ಗೇಟ್ ಕೊಚ್ಚಿ ಹೋದಂತಹ ಗಂಭೀರ ಪ್ರಕರಣಗಳು ಮುಂದೆ ಆಗದಂತೆ ತಡೆಯಬಹುದು ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ(H D Kumaraswamy) ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಘಟನೆ ಅತ್ಯಂತ ಗಂಭೀರವಾದದ್ದು. ನಾನು ಸರಕಾರಕ್ಕೆ ಒಂದು ಸಲಹೆ ಕೊಡಲು ಬಯಸುತ್ತೇನೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವಾಗ ದುಡ್ಡು ತೆಗೆದುಕೊಂಡು ಟ್ರಾನ್ಸ್‌ಫರ್ ಮಾಡೋದನ್ನು ಬಿಡಿ ಎಂದು ತಾಕೀತು ಮಾಡಿದರು.
ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್ ಎಷ್ಟರ ಮಟ್ಟಿಗೆ ವರ್ಗಾವಣೆ ದಂಧೆಯಲ್ಲಿ ತೊಡಗಿತ್ತು ಎಂದರೆ ಅವರು ನನಗೆ ವರ್ಗಾವಣೆ ಮಾಡುವ ಅಧಿಕಾರವನ್ನೇ ನೀಡಿರಲಿಲ್ಲ ಎಂದರು. ದುಡ್ಡು ಕೊಟ್ಡು ವರ್ಗಾವಣೆ ಮಾಡಿಸಿಕೊಂಡ ಅಧಿಕಾರಿಗಳಿಗೆ ಕೆಲಸದ ಕಡೆ ಗಮನ ಯಾಕಿರುತ್ತದೆ. ವರ್ಗಾವಣೆಗಾಗಿ ಖರ್ಚು ಮಾಡಿದ ಹಣವನ್ನು ವಸೂಲಿ ಮಾಡೋದ್ರಲ್ಲೇ ಅವರು ತಲ್ಲೀನರಾಗಿರುತ್ತಾರೆ. ಅವಧಿ ಮುಗಿಯೋದ್ರಲ್ಲಿ ಹಣ ಮಾಡುವ ಯೋಚನೆಯಲ್ಲಿರುತ್ತಾನೆ. ತುಂಗಭದ್ರಾ ಅಣೆಕಟ್ಟು ಘಟನೆ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ತರಾತುರಿಯಲ್ಲಿ ಏನೋ ಮಾಡಿ ಮತ್ತಿನ್ನೇನೋ ಅವಘಡ ಮಾಡಬೇಡಿ. ಪರಿಣಿತ ತಜ್ಞರ ಸಲಹೆ ಪಡೆದು ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ನಿರ್ವಹಿಸಿ. ಯಾಕೆಂದರೆ ಮತ್ತೆ ರೈತರಿಗೆ ತೊಂದರೆ ಕೊಡಬೇಡಿ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದರು.
ಜಲಾಶಯಗಳ ಸುರಕ್ಷತೆಯ ಬಗ್ಗೆ ತಾಂತ್ರಿಕ ಸಮಿತಿ ಪ್ರತೀ ವರ್ಷ ಭೇಟಿ ಕೊಟ್ಟು ಅಲ್ಲಿನ ಸ್ಥಿತಿಗತಿ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡುತ್ತದೆ. ರೆಡಿಮೇಡ್ ಪ್ರಶ್ನೆಗಳಿಗೆ ಅಲ್ಲೆ ಉಡಾಫೆ ಉತ್ತರ ಕೊಟ್ಟು ಬೇಜಾವಬ್ದಾರಿ ಕೆಲಸ ಮುಗಿಸಿ ಕೈ ತೊಳೆದುಕೊಳ್ಳುತ್ತಾರೆ. ಕ್ರಸ್ಟ್ ಗೇಟ್ ಗಳಿಗೆ ಅಳವಡಿಸಿರುವ ಸರಪಳಿಗಳನ್ನು ಸರಿಯಾದ ಸಮಯಕ್ಕೆ ಪರಿಶೀಲನೆ ಮಾಡಬೇಕು. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಈ ಪರಿಸ್ಥಿತಿ ಉಂಟಾಗಿದೆ ಎಂದು ರಾಜ್ಯ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದರು.
