ದಾನ ಮಾಡುವುದಕ್ಕಿಂತ ಶ್ರೇಷ್ಠ ಕಾರ್ಯ ಇನ್ನೊಂದಿಲ್ಲ. ಅದೊಂದು ಪುಣ್ಯ ಕಾರ್ಯವು ಹೌದು. ದಾನದ ಮೂಲಕ ಪುಣ್ಯ ಸಂಪಾದಿಸಿ. ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ಪಾಪಗಳನ್ನು ಕಳೆಯಬಹುದೆಂದು ಹಿರಿಯರು ಅನಾದಿ ಕಾಲದಿಂದಲೂ ಹೇಳುತ್ತಾ ಬಂದಿರುವರು. ಇದ್ದವರು ದೇವಾಲಯಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುವುದು ಹೊಸ ವಿಚಾರವೇನಲ್ಲ. ಆದರೆ ಇಲ್ಲದವರು ನೀಡುವ ದಾನ ಪರಮ ದಾನ ಎನ್ನಬಹುದು.
ಕುಂದಾಪುರ ತಾಲೂಕು ಸಾಲಿ ಗ್ರಾಮದ ನಿವಾಸಿ ಅಶ್ವತ್ಥಮ್ಮ ಎಂಬ ವೃದ್ದ ಮಹಿಳೆಯು ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಅನ್ನದಾನ ಕಾರ್ಯಕ್ರಮಕ್ಕೆ ಒಂದು ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿದ್ದಾರೆ. ವೃದ್ಧ ಮಹಿಳೆಯೊಬ್ಬರು ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದಲ್ಲಿ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಅನ್ನದಾನ ಕಾರ್ಯಕ್ರಮಕ್ಕೆ ದಾನ ನೀಡಿರುವುದು ವರದಿ ಆಗಿದೆ.
ಇವರು ದೇವಾಲಯದಲಲ್ಲಿ ಭಕ್ತರ ಎದುರು ಭಿಕ್ಷೆ ಬೇಡಿ ಭಕ್ತರು ಕೊಟ್ಟ ಹಣವನ್ನು ಸಂತೋಷದಿಂದ ಸ್ವೀಕರಿಸಿ ಆ ಹಣವನ್ನು ತಾನು ಖರ್ಚು ಮಾಡದೆ ಪಿಗ್ಮಿ ಯಲ್ಲಿ ಸಂಗ್ರಹಿಸಿ ಇಟ್ಟು ನಂತರ ದಾನ ಮಾಡುತ್ತಿದ್ದಾರೆ. ಈಗಾಗಲೇ ಹಲವು ದೇಗುಲಗಳಿಗೆ ಒಟ್ಟು ಒಂಬತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಮಾಹಿತಿ ದೊರೆತಿದೆ.
ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಅಶ್ವತ್ಥಮ್ಮ ತಮ್ಮ ಕುಟುಂಬದವರು ನಿಧನ ಹೊಂದಿದ ಬಳಿಕ ಸಮಾಜಕ್ಕೆ ಏನಾದರೂ ಕೊಡುಗೆ ಸಲ್ಲಿಸಬೇಕೆಂಬ ದೃಢ ನಿರ್ಧಾರ ಕೈಗೊಂಡು ದಿನನಿತ್ಯ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ದಾನ ನೀಡುತ್ತಿದ್ದಾರೆ.
ಒಟ್ಟಾರೆಯಾಗಿ ಇದ್ದದರಲ್ಲಿ ಹಂಚಿ ತಿನ್ನುವ ಗುಣವಿರುವ ಅಶ್ವತ್ಥಮ್ಮ ಅವರನ್ನು ಕಂಡು ಎಲ್ಲರೂ ಮೆಚ್ಚಿದ್ದಾರೆ. ದೇವರು ಅವರಿಗೆ ಸದಾ ಆರೋಗ್ಯ ನೀಡಿ ಅವರಿಗೆ ರಕ್ಷಣೆ ನೀಡಲೆಂದು ನಾವೆಲ್ಲ ಆಶಿಸೋಣ.
