Varthur Santhosh: ಹಳ್ಳಿಕಾರ್ ತಳಿಯ ಜಾನುವಾರು ಸಾಕಣಿಕೆಯ ಮುಳಕ ಜನಪ್ರಿಯತೆಯನ್ನು ಪಡೆದಿರುವ ವರ್ತೂರು ಸಂತೋಷ್ ಅವರಿಗೆ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಅವಕಾಶ ನೀಡಲಾಗಿತ್ತು. ಅಲ್ಲಿ ತನ್ನ ಉತ್ತಮ ಛಾಪು ಮೂಡಿಸಿದ ವರ್ತೂರು ಸಂತೋಷ್ ಅವರ ಮೇಲೆ ಇದೀಗ ಹಳ್ಳಿಕಾರ್ ಎಂಬ ಬಿರುದಿನಿಂದ ಕಂಟಕವೊಂದು ಶುರುವಾಗಿದೆ.
ಹೌದು, ವರ್ತೂರು ಸಂತೋಷ್ ವಿರುದ್ಧ ಹಳ್ಳಿಕಾರ್ ಸಂರಕ್ಷಕರು ಸಿಡಿದೆದ್ದಿದ್ದಾರೆ. ಸಂತೋಷ್ ಅವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ವರ್ತೂರು ಸಂತೋಷ್ ಅವರು ಬಿಗ್‌ಬಾಸ್ ಮನೆಯಲ್ಲಿರುವಾಗಲೇ ಹಳ್ಳಿಕಾರ್ ಒಡೆಯ ಎಂಬ ಬಿರುದು ವಿವಾದ ಉಂಟುಮಾಡಿತ್ತು. ಹಳ್ಳಿಕಾರ್ ಸಂರಕ್ಷಕರು ಚರ್ಚಾಗೋಷ್ಠಿ ನಡೆಸಿ, ವಾಗ್ವಾದ ಕೂಡಾ ನಡೆದಿತ್ತು. ಇತ್ತ ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ವರ್ತೂರು ಸಂತೋಷ್ ಅವರು ಟಾಂಗ್ ನೀಡಿದ್ದು, ಏಕವಚನದಲ್ಲಿ ಹಿರಿಯ ಹಳ್ಳಿಕಾರ್ ಸಂರಕ್ಷಕರ ವಿರುದ್ಧ ಟೀಕೆ ಮಾಡಿದ್ದರು. ಇದೀಗ ಸದ್ಯಕ್ಕೆ ವಿವಾದಕ್ಕೆ ಕಾರಣವಾಗಿದೆ. ವರ್ತೂರು ಅವರ ಮಾತಿಗೆ ಹಳ್ಳಿಕಾರ್ ಸಂರಕ್ಷಕರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ತಿರೋದು, ಬಿಂಬಿಸಿಕೊಳ್ತಿರುವುದು ಸರಿಯಲ್ಲ. ಇದು ಹಳ್ಳಿಕಾರ್ ಜನಾಂಗಕ್ಕೆ ಅಪಮಾನವಾಗಿದೆ. ತಲಾತಲಾಂತರದಿಂದ ಹಳ್ಳಿಕಾರ್ ಸಂರಕ್ಷಣೆ ಮಾಡ್ತಿರುವ ರೈತರ ಭಾವನೆಗೂ ಧಕ್ಕೆ, ಅವಮಾನ ಆಗಿದೆ. ಗೂಗಲ್ ನಲ್ಲಿಯೂ ಛೇರ್ ಮೇನ್ ಆಫ್ ಆಲ್ ಇಂಡಿಯಾ ಹಳ್ಳಿಕಾರ್ ಕನ್ಸರ್ವೇಶನ್ ಎಂದು ರಾಂಗ್ ಮೆಸೇಜ್ ನೀಡಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ಹೋಗುತ್ತೆ. ವರ್ತೂರ್ ಸಂತೋಷನಿಂದಲೇ ಹಳ್ಳಿಕಾರ್ ತಳಿ ಹುಟ್ಟಿತು ಎಂದು ಬಿಂಬಿತವಾಗಬಹುದು. ಆದ್ದರಿಂದ ಕಾನೂನಾತ್ಮಕವಾಗಿ ಹೋರಾಟ ಮಾಡ್ತೇನೆ. ಎಲ್ಲಾ ದಾಖಲಾತಿಗಳನ್ನ ಸಂಗ್ರಹಿಸುತ್ತಿದ್ದು ಶೀಘ್ರ ಕಾನೂನು ಸಮರ ಸಾರುತ್ತೇವೆ. ಗೂಗಲ್ ವಿರುದ್ದ ಕಾನೂನು ಹೋರಾಟ ಮಾಡ್ತೇವೆ ಎಂದು ಹಳ್ಳಿಕಾರ್ ಸಂರಕ್ಷಕ ರವಿ ಪಟೇಲ್ ಎಚ್ಚರಿಕೆ ನೀಡಿರುವ ಕುರಿತು ಟಿವಿ9 ವರದಿ ಮಾಡಿದೆ.
