Home » ಸರಕಾರದಿಂದ ಆತ್ಮಹತ್ಯೆ ತಡೆಗೆ ಮೊದಲ ನೀತಿ ಬಿಡುಗಡೆ!

ಸರಕಾರದಿಂದ ಆತ್ಮಹತ್ಯೆ ತಡೆಗೆ ಮೊದಲ ನೀತಿ ಬಿಡುಗಡೆ!

0 comments

ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಜನರು ಸಣ್ಣ ಸಣ್ಣ ವಿಷಯಗಳಿಗೂ ಬೇಸರಗೊಂಡು, ಜೀವನದ ಸವಾಲುಗಳನ್ನು ಎದುರಿಸಲಾಗದೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಇದೀಗ ಸರ್ಕಾರ ಆತ್ಮಹತ್ಯೆಯನ್ನು ತಡೆಗಟ್ಟಲು ಹೊಸ ಕಾರ್ಯತಂತ್ರ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಷ್ಟ್ರೀಯ ಯೋಜನೆಯನ್ನು ಸದ್ಯ ಪ್ರಸ್ತಾಪಿಸಿದೆ. ಇನ್ನೂ ಆತ್ಮಹತ್ಯೆ ತಡೆಗಟ್ಟಲು ಸರ್ಕಾರ ರೂಪಿಸಿದ ಮೊದಲ ನೀತಿ ಏನೆಂದು ಇಲ್ಲಿದೆ.

ಭಾರತದ ರಾಷ್ಟ್ರೀಯ ಆತ್ಮಹತ್ಯೆ ತಡೆ ಕಾರ್ಯತಂತ್ರವು ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಮತ್ತು ಆತ್ಮಹತ್ಯೆಯನ್ನು ತಡೆಗಟ್ಟಲು ಮುಂದಿನ ದಶಕದಲ್ಲಿ ವೇದಿಕೆಯನ್ನು ಒದಗಿಸುತ್ತದೆ ಎಂಬುದು ಸಚಿವಾಲಯದ ನಿರೀಕ್ಷೆಯಾಗಿದೆ. ಇನ್ನೂ, 2023ರ ವೇಳೆಗೆ ದೇಶದಲ್ಲಿ ಆತ್ಮಹತ್ಯೆ ಪ್ರಮಾಣವನ್ನು ಶೇಕಡಾ 10ರಷ್ಟು ಕಡಿಮೆ ಮಾಡುವುದು ಈ ಕಾರ್ಯತಂತ್ರದ ಗುರಿಯಾಗಿದೆ.

ಆತ್ಮಹತ್ಯೆ ತಡೆ ಕಾರ್ಯತಂತ್ರದಲ್ಲಿ ಮುಖ್ಯವಾಗಿ ನಾಲ್ಕು ಉದ್ದೇಶಗಳಿವೆ ಎನ್ನಲಾಗಿದೆ.

  • ಮುಂಬರುವ ಮೂರು ವರ್ಷಗಳಲ್ಲಿ ಆತ್ಮಹತ್ಯೆಗೆ ಪರಿಣಾಮಕಾರಿ ಕಣ್ಗಾವಲು ಕಾರ್ಯವಿಧಾನಗಳ ರಚನೆಗೆ ಪ್ರಯತ್ನ ಪಡುವುದು.
  • ಇನ್ನೂ, ಮುಂದಿನ ಐದು ವರ್ಷಗಳಲ್ಲಿ ಪ್ರತಿ ಜಿಲ್ಲೆಗಳಲ್ಲೂ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಆಯೋಜಿಸುವುದು. ಹಾಗೂ ಆತ್ಮಹತ್ಯೆ ತಡೆಗಟ್ಟುವಂತಹ ಸೇವೆಗಳನ್ನು ಒದಗಿಸುವ ಮನೋವೈದ್ಯಕೀಯ ಹೊರರೋಗಿ ವಿಭಾಗಗಳನ್ನು ಸ್ಥಾಪಿಸಲು ಪ್ರಯತ್ನಿಸುವುದು.
  • ಮುಂದಿನ ಎಂಟು ವರ್ಷಗಳಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಲ್ಲೂ, ಮಾನಸಿಕ ಯೋಗಕ್ಷೇಮ ಪಠ್ಯಕ್ರಮವನ್ನು ಸಂಯೋಜಿಸುವ ಕಾರ್ಯ ಮಾಡುವುದು.
  • ನಾಲ್ಕನೆಯದು, ಆತ್ಮಹತ್ಯೆಯ ಕಣ್ಗಾವಲನ್ನು ಬಲಪಡಿಸುವುದು. ಹಾಗೂ ಮೌಲ್ಯಮಾಪನದ ಮೂಲಕ ಇನ್ನಷ್ಟು ಸಾಕ್ಷಿಗಳನ್ನು ಹುಡುಕಿ, ಸಂಗ್ರಹಿಸಿ ಕಾರ್ಯಕ್ರಮದ ಗುಣಮಟ್ಟದಲ್ಲಿ ಸುಧಾರಣೆ ತರುವುದಾಗಿದೆ. ಇವಿಷ್ಟು ಆತ್ಮಹತ್ಯೆ ತಡೆಗಟ್ಟಲು ಕೈಗೊಳ್ಳಬೇಕೆಂದಿರುವ ಕಾರ್ಯಗಳು.

ಇನ್ನೂ, ಈ ಕಾರ್ಯತಂತ್ರದ ಅನುಷ್ಠಾನ ಚೌಕಟ್ಟು ಉದ್ದೇಶಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಇರುವ ಐದು ರೀತಿಯ ಪ್ರಮುಖ ಪಾಲುದಾರರು ಈ ಯೋಜನೆಯಲ್ಲಿ ಇದ್ದಾರೆ. ರಾಷ್ಟ್ರೀಯ ಮಟ್ಟದ ಸಚಿವಾಲಯದ ಪಾಲುದಾರರು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸರ್ಕಾರಿ ಪಾಲುದಾರರು, ಬೆಂಗಳೂರಿನ ನಿಮ್ಹಾನ್ಸ್ ಮತ್ತು ಇತರ ಉನ್ನತ ಮಾನಸಿಕ ಆರೋಗ್ಯ ಸಂಸ್ಥೆಗಳು ಮತ್ತು ಕಾರ್ಯತಂತ್ರದ ಸಹಯೋಗಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ.

ಹಾಗೇ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಈಗಾಗಲೇ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ಉಪಶಮನ ಆರೈಕೆ ಕಾರ್ಯಕ್ರಮ, ಆಯುಷ್ಮಾನ್ ಭಾರತ್ ಮತ್ತು ನಶೆ ಮುಕ್ತಿ ಅಭಿಯಾನ ಕಾರ್ಯಪಡೆಯಂತಹ ಹಲವು ರಾಷ್ಟ್ರೀಯ ಕಾರ್ಯಕ್ರಮಗಳು ಕೂಡ ಜಾರಿಯಲ್ಲಿವೆ.

ಎನ್‌ಸಿಆ‌ರ್ ಬಿ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದೆ. 2021ರ ಅವಧಿಯಲ್ಲಿ ದೇಶದ 53 ಮಹಾನಗರಗಳಲ್ಲಿ ಒಟ್ಟು ಬರೋಬ್ಬರಿ 25,891 ಆತ್ಮಹತ್ಯೆಗಳು ವರದಿಯಾಗಿದ್ದು, ಇದರಲ್ಲಿ ದೆಹಲಿಯ ಪ್ರಕರಣ ಅತಿ ಹೆಚ್ಚು ಇದೆಯೆಂದು ತಿಳಿದುಬಂದಿದೆ. ಕಳೆದ ಮೂರು ವರ್ಷಗಳಲ್ಲಿ, ದೇಶದಲ್ಲಿ ಆತ್ಮಹತ್ಯೆ ಪ್ರಮಾಣ 1,00,000 ಜನಸಂಖ್ಯೆ 10.2 ರಿಂದ 11.3 ಕ್ಕೆ ಏರಿದೆ. ಅಂದರೆ 8850 ಜನರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಾಗಿದೆ. ಇನ್ನೂ ಭಾರತದಲ್ಲಿ ಯುವಕರು ಮತ್ತು ಮಧ್ಯವಯಸ್ಕರ ಆತ್ಮಹತ್ಯೆಗಳು ಅಧಿಕವಾಗಿದೆ. 2020ರಲ್ಲಿ 18ರಿಂದ 45 ವರ್ಷ ವಯಸ್ಸಿನವರಲ್ಲಿ 65 ಪ್ರತಿಶತದಷ್ಟು ಆತ್ಮಹತ್ಯೆಗಳು ವರದಿಯಾಗಿವೆ.

ಇನ್ನೂ ಇದರ ಅನುಷ್ಠಾನ ಕಾರ್ಯವಿಧಾನ ಹೇಗೆಂದರೆ, ದೇಶದಲ್ಲಿ ನಾಯಕತ್ವ ಪಾಲುದಾರಿಕೆ ಮತ್ತು ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುವುದಾಗಿದೆ. ಎರಡನೆಯದಾಗಿ, ಆತ್ಮಹತ್ಯೆ ತಡೆಗಟ್ಟುವ ಸೇವೆಗಳನ್ನು ಒದಗಿಸಲು ಆರೋಗ್ಯ ಸೇವೆಗಳ ಸಾಮರ್ಥ್ಯ ಹೆಚ್ಚಿಸುವುದಾಗಿದೆ. ಹಾಗೇ ಮೂರನೆಯದು, ಆತ್ಮಹತ್ಯೆ ತಡೆಗಟ್ಟಲು ಸಮುದಾಯದ ಸ್ಥಿತಿಸ್ಥಾಪಕತ್ವ ಮತ್ತು ಸಾಮಾಜಿಕ ಬೆಂಬಲವನ್ನು ಅಭಿವೃದ್ಧಿಪಡಿಸುವುದು. ಜೊತೆಗೆ ಆತ್ಮಹತ್ಯಾ ನಡವಳಿಕೆಗಳಿಗೆ ಸಂಬಂಧಿಸಿದ ಕಳಂಕವನ್ನು ಕಡಿಮೆ ಮಾಡುವುದಾಗಿದೆ.

You may also like

Leave a Comment