Vittal Halgekar : ಪ್ರಸ್ತುತ ದಿನಗಳಲ್ಲಿ ಅಧಿಕಾರದ ಮಧ ಯಾರನ್ನು ಏನು ಬೇಕಾದರೂ ಮಾಡಿಸುತ್ತದೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಆದರೆ ಸಾಕು ತಾನೇ ದೊಡ್ಡ ರಾಜಕಾರಣಿ ಎಂದು ಅನೇಕರು ಮೆರೆಯುವುದನ್ನು ಕಾಣುತ್ತೇವೆ. ಅಷ್ಟೇ ಅಲ್ಲದೆ ಸಮಾಜದ ಯಾವುದೇ ಉನ್ನತ ಹುದ್ದೆಯಲ್ಲಿ ಇದ್ದರೆ ಕೆಲವರು ಅಧಿಕಾರದ ದರ್ಪ ಮೆರೆಯುವುದನ್ನು ಕಾಣಬಹುದು. ಜೊತೆಗೆ ಐಷಾರಾಮಿ ಕಾರು, ದೊಡ್ಡ ದೊಡ್ಡ ಬಂಗಲೆಗಳನ್ನು ಕೊಂಡು ಹೀಗೆ ವಿಲಾಸಿ ಜೀವನವನ್ನು ನಡೆಸಲು ಆರಂಭಿಸುತ್ತಾರೆ. ಇಂಥವರ ನಡುವೆ ಇಲ್ಲೊಬ್ಬರು ಆದರ್ಶ ವ್ಯಕ್ತಿ ತಾನು ಶಾಸಕರಾದರು ಕೂಡ ತನ್ನ ಮೊದಲ ಜೀವನವನ್ನು ಬದಲಾಯಿಸಿಕೊಳ್ಳದೆ ಬದುಕು ಸಾಗಿಸುತ್ತಿದ್ದಾರೆ.
ಹೌದು, ಖಾನಾಪುರದ ಬಿಜೆಪಿ ಶಾಸಕ ವಿಠ್ಠಲ ಹಲಗೆಕರ್ ಒಬ್ಬ ಸರಳ ಶಾಸಕರಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರನ್ನು ಕೇವಲ ‘ಸರಳ’ ಎನ್ನುವುದಕ್ಕಿಂತ ಸಮಾಜಕ್ಕೆ ‘ಪ್ರೇರಣಾದಾಯಿ’ ಎನ್ನುವುದೇ ಹೆಚ್ಚು ಸೂಕ್ತ. ವಿಠ್ಠಲ ಹಲಗೆಕರ್ ಅವರು ಮೂಲತಃ ಗಣಿತದ ಮೇಷ್ಟ್ರು (M.Sc). ಶಿಕ್ಷಕ ವೃತ್ತಿಯಲ್ಲಿದ್ದಾಗ ಅವರು ಕೇವಲ ಒಂದು ರೂಪಾಯಿ ಫೀಸ್ ಪಡೆದು ಸಂಜೆ ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದರು. ಆ ಒಂದೊಂದು ರೂಪಾಯಿಯನ್ನು ಒಗ್ಗೂಡಿಸಿ ಸ್ವಸಹಾಯ ಸಂಘಕ್ಕೆ ನೀಡಿ, ಇಂದು ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ‘ಮಹಾಲಕ್ಷ್ಮಿ ಸ್ವಸಹಾಯ ಸಂಘ’ವನ್ನು ಕಟ್ಟಿ ಬೆಳೆಸಿದ್ದಾರೆ. ಜೊತೆಗೆ ಸಾವಿರಾರು ಕುಟುಂಬಗಳಿಗೆ ಆಧಾರವಾಗಿದ್ದಾರೆ.
ಇಷ್ಟೆಲ್ಲಾ ಆದರೂ ಕೂಡ ವಿಠ್ಠಲ ಅವರ ಪತ್ನಿ ರುಕ್ಮಿಣಿ ಇಂದಿಗೂ ತೋಪಿನಕಟ್ಟಿ ಗ್ರಾಮದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮಗೆ ಮಕ್ಕಳಿಲ್ಲ ಎಂಬ ನೋವನ್ನು ನುಂಗಿ, ಆ ಊರಿನ ಎಲ್ಲ ಮಕ್ಕಳನ್ನು ತಮ್ಮದೇ ಮಕ್ಕಳೆಂದು ಪ್ರೀತಿಸುತ್ತಾ ಆಟ ಪಾಠ ಕಲಿಸುತ್ತಿದ್ದಾರೆ. ತಮ್ಮ ಮನೆಯ ಯಾರಾದರೂ ಒಬ್ಬರು ರಾಜಕೀಯದಲ್ಲಿ ಗುರುತಿಸಿಕೊಂಡರೆ ಅದನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸಿಕೊಳ್ಳುವವರೆ ಹೆಚ್ಚು. ಆದರೆ ಹಲಗೆಕರ್ ಅವರ ಇಬ್ಬರು ಸಹೋದರರು ಇಂದಿಗೂ ಗಾರೆ ಕೆಲಸ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ.
ವಿಶೇಷವೆಂದರೆ ಸ್ವತಃ ಶಾಸಕ ವಿಠ್ಠಲ ಹಲಗೆಕರ್ ಅವರು ಕೂಡಾ ಅಧಿವೇಶನಕ್ಕೆ ಹೋಗುವ ಮೊದಲು, ಬೆಳಿಗ್ಗೆ 9 ಗಂಟೆಯವರೆಗೆ ಹೊಲದಲ್ಲಿ ಆಳಿನಂತೆ ದುಡಿದು ನಂತರವೇ ಸದನಕ್ಕೆ ಬರುತ್ತಾರೆ. ಅಧಿಕಾರ ತಲೆಗೆ ಏರದೇ ಮಣ್ಣಿನ ಗುಣ ಮರೆಯದ ನಿಜವಾದ ರೈತ ಇವರು. ಖಾನಾಪುರದಲ್ಲಿ ಇವರು ನಡೆಸುವ ಶಾಂತಿನಿಕೇತನ ಸಿಬಿಎಸ್ಇ ಶಾಲೆಯಲ್ಲಿ ಅನೇಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಭ್ರಷ್ಟಾಚಾರರಹಿತ, ಜನಸ್ನೇಹಿ ರಾಜಕಾರಣಕ್ಕೆ ಇವರು ಮಾದರಿ. ಚುನಾವಣೆ ಸಮಯದಲ್ಲಿ ಮತ ಕೇಳಲು ಬಡವರ ಮನೆಗೆ ಹೋಗಿ, ಗೆದ್ದ ಮೇಲೆ ಮುಖ ತಿರುಗಿಸುವವರ ನಡುವೆ ವಿಠ್ಠಲ ಹಲಗೆಕರ್ ಭರವಸೆಯ ಬೆಳಕಾಗಿ ಕಂಡಿದ್ದಾರೆ. ರಾಜಕೀಯವನ್ನು ಲಾಭಕ್ಕಾಗಿ ಬಳಸಿಕೊಳ್ಳುವ ಇಂದಿನ ರಾಜಕಾರಣಿಗಳ ನಡುವೆ ಇಂತಹ ಒಬ್ಬ ಮಾದರಿ ರಾಜಕಾರಣಿಗಳು ನಮ್ಮ ನಡುವೆ ಇರುವುದೇ ಹೆಮ್ಮೆಯ ಸಂಗತಿ.
