ICC: ಮುಂಬೈನ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ನ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದ ಮಹಿಳಾ ತಂಡವನ್ನು 52 ರನ್ ಗಳ ಅಂತರದಿಂದ ಸೋಲಿಸುವ ಮೂಲಕ ಚೊಚ್ಚಲ ವಿಶ್ವಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಸಂಭ್ರಮ ದೇಶಾದ್ಯಂತ ಕಳೆಗಟ್ಟಿದೆ. ಈ ನಡುವೆಯೇ ಮಹಿಳಾ ವಿಶ್ವಕಪ್ ಟ್ರೋಫಿಯನ್ನು ಐಸಿಸಿ ಹಿಂಪಡೆಯಲು ಮುಂದಾಗಿದೆ. ಆದರೆ ಇದರ ಹಿಂದೆ ಬೇರೆ ಕಾರಣವೂ ಇದೆ.
ಯಸ್, ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ಬಳಿಕ ಐಸಿಸಿ ಅಧ್ಯಕ್ಷ ಜಯ್ ಶಾ ಭಾರತ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ಹೊಳೆಯುವ ಟ್ರೋಫಿಯನ್ನು ಹಸ್ತಾಂತರಿಸಿದರು. ಆದರೆ, ಈ ಟ್ರೋಫಿಯನ್ನು ಶೀಘ್ರದಲ್ಲೇ ಐಸಿಸಿ ಹಿಂತೆಗೆದುಕೊಳ್ಳಲಿದೆ. ವಿಶ್ವಕಪ್ ಜಯಿಸಿದ ತಂಡಕ್ಕೆ ನೀಡಲಾಗುವ ಮೂಲ ಟ್ರೋಫಿಯನ್ನು ಕೇವಲ ಫೋಟೋಶೂಟ್‌ಗಾಗಿ ಮಾತ್ರ ನೀಡಲಾಗುತ್ತದೆ. ಬಳಿಕ ಅದನ್ನು ಹಿಂತೆಗೆದು, ಅದರ ಪ್ರತಿಕೃತಿ (ನಕಲಿ ಟ್ರೋಫಿ)ಯನ್ನು ತಂಡಕ್ಕೆ ನೀಡಲಾಗುತ್ತದೆ.
ಅಂದಹಾಗೆ ಈ ನಿಯಮವನ್ನು ಐಸಿಸಿ 26 ವರ್ಷಗಳ ಹಿಂದೆ ಜಾರಿಗೆ ತಂದಿದ್ದು, ಯಾವುದೇ ತಂಡಕ್ಕೂ ಮೂಲ ಟ್ರೋಫಿಯನ್ನು ಶಾಶ್ವತವಾಗಿ ನೀಡುವುದಿಲ್ಲ. ಹಿಂತೆಗೆದುಕೊಳ್ಳಲಾದ ಮೂಲ ಟ್ರೋಫಿಯನ್ನು ದುಬೈನಲ್ಲಿರುವ ಐಸಿಸಿ ಕಚೇರಿಯಲ್ಲಿ ಸುರಕ್ಷಿತವಾಗಿ ಇಡಲಾಗುತ್ತದೆ ಮತ್ತು ಮುಂದಿನ ವಿಶ್ವಕಪ್‌ವರೆಗೂ ಅಲ್ಲಿ ಉಳಿಯುತ್ತದೆ. ಪ್ರತಿಯೊಂದು ಟೂರ್ನಿಗಾಗಿ ವಿನ್ಯಾಸಗೊಳಿಸಲಾದ ಟ್ರೋಫಿಗಳು ವಿಶಿಷ್ಟವಾಗಿರುವುದರಿಂದ, ಅವುಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳುವುದು ಉದ್ದೇಶವಾಗಿದೆ.
ಇನ್ನೂ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯು ಸುಮಾರು 11 ಕೆ.ಜಿ ತೂಕ ಹೊಂದಿದ್ದು, 60 ಸೆಂ.ಮೀ ಎತ್ತರವಿದೆ. ಇದು ಸ್ಟಂಪ್ ಮತ್ತು ಬೇಲ್ ಆಕಾರದ ಮೂರು ಬೆಳ್ಳಿ ಸ್ತಂಭಗಳು ಹಾಗೂ ಅದರ ಮೇಲಿರುವ ಚಿನ್ನದ ಗ್ಲೋಬ್ ವಿನ್ಯಾಸದಿಂದ ಅಲಂಕರಿಸಲಾಗಿದೆ.
