RCB: 2026 ರ ಮಹಿಳೆಯರ ಐಪಿಎಲ್ ಮ್ಯಾಚ್ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳ 27ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ನಿನ್ನೆ ( ನವೆಂಬರ್ 6 ) ಬಿಸಿಸಿಐ ನಿಯಮದಂತೆ ಎಲ್ಲ 5 ತಂಡಗಳು ಯಾವ ಆಟಗಾರ್ತಿಯರನ್ನು ಎಷ್ಟು ಹಣಕ್ಕೆ ಉಳಿಸಿಕೊಂಡಿದ್ದೇವೆ ಎಂಬುದನ್ನು ಬಿಚ್ಚಿಟ್ಟಿವೆ.
ಹೌದು, ವನಿತಾ ಪ್ರೀಮಿಯರ್ ಲೀಗ್ (WPL) ಮುಂದಿನ ಮೆಗಾ ಹರಾಜಿಗೆ ಮುನ್ನ ಎಲ್ಲಾ ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಅಟಗಾರ್ತಿಯರ ಪಟ್ಟಿ ಪ್ರಕಟಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಮೊದಲನೆಯದಾಗಿ ಸ್ಮೃತಿ ಮಂಧಾನರನ್ನು ಉಳಿಸಿಕೊಂಡಿದ್ದು, 3.5 ಕೋಟಿ ನೀಡಿದೆ. ಎರಡನೆಯದಾಗಿ 2.75 ಕೋಟಿ ನೀಡಿ ರಿಚಾ ಘೋಷ್‌ರನ್ನು ಉಳಿಸಿಕೊಂಡಿದೆ. ಮೂರನೆಯದಾಗಿ ಆಸ್ಟ್ರೇಲಿಯಾದ ಎಲ್ಲಿಸ್ ಪೆರಿಯನ್ನು 2 ಕೋಟಿ ನೀಡಿ ಉಳಿಸಿಕೊಂಡಿದೆ. ನಾಲ್ಕನೆಯದಾಗಿ ಕನ್ನಡತಿ ಶ್ರೇಯಾಂಕ ಪಾಟೀಲ್‌ಗೆ 60 ಲಕ್ಷ ನೀಡಿ ಉಳಿಸಿಕೊಂಡಿದೆ. ಆರ್‌ಸಿಬಿ ಬಳಿ 6.15 ಕೋಟಿ ಉಳಿದುಕೊಂಡಿದೆ.
ಇನ್ನೂ ಅಚ್ಚರಿಯೆಂಬಂತೆ ಇತ್ತೀಚೆಗಷ್ಟೇ ವಿಶ್ವಕಪ್ ನಲ್ಲಿ ಮಿಂಚಿದ್ದ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಟ್ ಅವರನ್ನು ಗುಜರಾತ್ ಜೈಂಟ್ಸ್ ಕೈಬಿಟ್ಟಿದೆ. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್‌ನಲ್ಲಿ ವೋಲ್ವಾರ್ಟ್ ಅತ್ಯಧಿಕ ಸ್ಕೋರ್ ಗಳಿಸಿ ದಾಖಲೆ ಬರೆದಿದ್ದರು. ಆದರೆ ನಿಯಮಗಳ ಪ್ರಕಾರ ಇಬ್ಬರು ವಿದೇಶಿ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶವಿತ್ತು, ಹೀಗಾಗಿ ಗುಜರಾತ್ ಜೈಂಟ್ಸ್ ಆಸ್ಟ್ರೇಲಿಯಾದ ಜೋಡಿಯಾದ ಬೆತ್ ಮೂನಿ ಮತ್ತು ಆಶ್ಲೀ ಗಾರ್ಡ್ನರ್ ಅವರನ್ನು ಉಳಿಸಿಕೊಂಡಿದೆ.
