Tata: ಮುಂಬೈನ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ನ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದ ಮಹಿಳಾ ತಂಡವನ್ನು 52 ರನ್ ಗಳ ಅಂತರದಿಂದ ಸೋಲಿಸುವ ಮೂಲಕ ಚೊಚ್ಚಲ ವಿಶ್ವಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಸಂಭ್ರಮ ದೇಶಾದ್ಯಂತ ಕಳೆಗಟ್ಟಿದೆ. ಈ ನಡುವೆಯೇ ಮಹಿಳಾ ವಿಶ್ವಕಪ್ ಟ್ರೋಫಿ ಗೆದ್ದ ವನಿತೆಯರಿಗೆ ಟಾಟಾ ಮೋಟಾರ್ಸ್ ಭರ್ಜರಿ ಗಿಫ್ಟ್ ಘೋಷಿಸಿದೆ.
ಹೌದು, ಐಸಿಸಿ ಮಹಿಳಾ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಬಂಪರ್ ಬಹುಮಾನ ಘೋಷಿಸಿದ್ದು, ತಂಡದ ಎಲ್ಲ ಆಟಗಾರರಿಗೂ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಟಾ ಸಿಯೆರಾ ಎಸ್‌ಯುವಿ ಕಾರುಗಳನ್ನು (Sierra SUVs) ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ.
ಈ ಕುರಿತಾಗಿ ಕಂಪನಿಯು ಹೇಳಿಕೊಂಡಿದ್ದು ಇದು ತಂಡದ ಐತಿಹಾಸಿಕ ವಿಜಯದ ಸಂಭ್ರಮದ ಸಂಕೇತವಾಗಿದೆ. ಆಟಗಾರರ ಸ್ಥಿರತೆ, ದೃಢನಿಶ್ಚಯ ಮತ್ತು ಭಾರತೀಯ ಕ್ರೀಡೆಗೆ ನೀಡಿದ ಕೊಡುಗೆಯನ್ನು ಗೌರವಿಸುತ್ತದೆ ಅದಮ್ಯ ಚೈತನ್ಯ ಮತ್ತು ಸ್ಪೂರ್ತಿದಾಯಕ ಆಟದ ಗೌರವವಾಗಿ ಎಲ್ಲಾ ಆಟಗಾರರಿಗೆ ಸಿಯೆರಾದ ಉನ್ನತ-ಮಟ್ಟದ ಕಾರುಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದಿದೆ.
ಅಲ್ಲದೆ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶೈಲೇಶ್ ಚಂದ್ರ ಅವರು ‘ನವೆಂಬರ್ 25 ರಂದು ಕಾರು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಈ ಘೋಷಣೆ ಹೊರಬಿದ್ದಿದೆ. ಐಕಾನಿಕ್ ಮಾಡೆಲ್ ಭಾರತೀಯ ಮಾರುಕಟ್ಟೆಗೆ ಮತ್ತೆ ಹೊಸ ರೂಪದಲ್ಲಿ ಮರಳುತ್ತಿದೆ. ಭಾರತ ತಂಡದ ಗೆಲುವು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ನೀಡುವ ನಂಬಿಕೆ ಮತ್ತು ದೃಢಸಂಕಲ್ಪದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದ್ದಾರೆ.
