Upcoming SUV car : ಆರಾಮದಾಯಕವಾಗಿ ಮತ್ತು ಸೇಫ್ ಆಗಿ ಕುಟುಂಬ ಸಮೇತ ಪ್ರಯಾಣ ಮಾಡಲು ಮತ್ತು ಆಂತರಿಕ ಸ್ಥಳವನ್ನು ಬಯಸುವ ಜನರಿಗೆ ಎಸ್‌ಯುವಿ (SUV car) ಅತ್ಯುತ್ತಮ ಆಯ್ಕೆಯಾಗಿದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಸಬ್ 4-ಮೀಟರ್ ಎಸ್‌ಯುವಿಗಳು ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಇದೀಗ ನಿಮಗಾಗಿ ರೂ.15 ಲಕ್ಷ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸದೊಂದಿಗೆ ಮುಂಬರಲಿರುವ 3 ಎಸ್‌ಯುವಿಗಳನ್ನು (Upcoming SUV car) ಇಲ್ಲಿ ತಿಳಿಸಲಾಗಿದೆ.
ಹ್ಯುಂಡೈ ನ ‘Ai3’ ಎಂಬ ಕೋಡ್ ನೇಮ್ ಹೊಂದಿರುವ ಮೈಕ್ರೋ ಎಸ್‌ಯುವಿ:
ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ‘ಹ್ಯುಂಡೈ’, ಈ ವರ್ಷದ ಕೊನೆಯಲ್ಲಿ ಹೊಸ ಎಸ್‌ಯುವಿಯೊಂದನ್ನು ಭಾರತದ ಮಾರುಕಟ್ಟೆ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕಂಪನಿಯು ‘Ai3’ ಎಂಬ ಕೋಡ್ ನೇಮ್ ಹೊಂದಿರುವ ಮೈಕ್ರೋ ಎಸ್‌ಯುವಿಯನ್ನು ಕೊರಿಯಾದ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷೆ ನಡೆಸಿದೆ. ಇದು ಗ್ರಾಹಕರನ್ನು ಆಕರ್ಷಿಸುವ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.
ಇದು 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದೆ. ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ಇದರ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಬಹುದು. ರೂ.15 ಲಕ್ಷ ಬೆಲೆ ಅಸುಪಾಸಿನಲ್ಲಿ ದೊರೆಯಲಿದೆ.
ಮಾರುತಿ ಸುಜುಕಿ ಕಂಪನಿ ‘ಫ್ರಾಂಕ್ಸ್’ ಎಸ್‌ಯುವಿ:
ಮಾರುತಿ ಸುಜುಕಿ ಕಂಪನಿ ‘ಫ್ರಾಂಕ್ಸ್’ ಎಸ್‌ಯುವಿಯನ್ನು ಮುಂದಿನ ತಿಂಗಳು (ಏಪ್ರಿಲ್) ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಈ ಎಸ್‌ಯುವಿಯನ್ನು ಅನಾವರಣ ಮಾಡಲಾಗಿತ್ತು. ಅಂದಿನಿಂದಲೇ ಬುಕಿಂಗ್ ಕೂಡ ಆರಂಭಿಸಿದ್ದು, ಇನ್ನು ಆಸಕ್ತ ಗ್ರಾಹಕರು, ರೂ.11,000 ಮೊತ್ತ ಪಾವತಿಸುವ ಮೂಲಕ ಆನ್‌ಲೈನ್ ಅಥವಾ ನೆಕ್ಸಾ (NEXA ) ಡೀಲರ್‌ಶಿಪ್‌ಗಳಲ್ಲಿ ಬುಕ್ ಮಾಡಬಹುದು.
ಬಹುತೇಕ ಈ ಫ್ರಾಂಕ್ಸ್ ಎಸ್‌ಯುವಿ ರೂ.15 ಲಕ್ಷ ದರದೊಳಗೆ ಖರೀದಿಗೆ ಲಭ್ಯವಾಗಲಿದೆ. 1.2-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು, 89 bhp ಗರಿಷ್ಠ ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 100 bhp ಪವರ್, 148 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮ್ಯಾನುವಲ್/ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿರಲಿದೆ.
ಟಾಟಾ ಮೋಟಾರ್ಸ್ ನ ನಿಕ್ಸನ್ ಎಸ್‌ಯುವಿ :
ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್, ತನ್ನ ನವೀಕರಿಸಿದ ನಿಕ್ಸನ್ ಎಸ್‌ಯುವಿಯನ್ನು ಈಗಾಗಲೇ ರಸ್ತೆಗಳಲ್ಲಿ ಪರೀಕ್ಷಿಸಿದ್ದು, ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಿದೆ. ಇದರ ಒಳಭಾಗ ಹಾಗೂ ಹೊರಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದಿರಲಿದೆ. ಜೊತೆಗೆ ಪವರ್ ಫುಲ್ ಎಂಜಿನ್ ಆಯ್ಕೆಯಲ್ಲಿ ಸಿಗಬಹುದು. ಆದರೆ, ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ನಿಕ್ಸನ್ ಎಸ್‌ಯುವಿ ಇದು 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ನೂತನ ಡ್ಯಾಶ್‌ಬೋರ್ಡ್ ಹೊಂದಿರುತ್ತದೆ. ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 125 PS ಗರಿಷ್ಠ ಪವರ್, 225 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಡ್ಯುಯಲ್-ಕ್ಲಚ್ ಆರೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯನ್ನು ಪಡೆದಿರಲಿದೆ.
ಸದ್ಯ ಹ್ಯುಂಡೈ, ಟಾಟಾ ಮೋಟಾರ್ಸ್ ಹಾಗೂ ಮಾರುತಿ ಸುಜುಕಿ ಕಂಪನಿಗಳು ವಿವಿಧ ಎಸ್‌ಯುವಿಗಳನ್ನು ಲಾಂಚ್ ಮಾಡಲು ಹೊರಟಿದ್ದು, ಅವು ಭಾರತ ಮಾರುಕಟ್ಟೆಯಲ್ಲಿ ತನ್ನದೇ ಹವಾ ಸೃಷ್ಟಿ ಮಾಡಲಿದ್ದು ಟಾಟಾ ಪಂಚ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಹಾಗೂ ಮಾರುತಿ ಸುಜುಕಿ ಫ್ರಾಂಕ್ಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.
ಇದನ್ನೂ ಓದಿ : ಮಾರುತಿ ಸುಜುಕಿಯಿಂದ ಬ್ರೀಜಾ ಸಿಎನ್‌ಜಿ ಬಿಡುಗಡೆ!
