Mantralaya : ದೇಶದ ಅತ್ಯಂತ ಪ್ರಮುಖ ಪುಣ್ಯ ಕ್ಷೇತ್ರಗಳ ಪೈಕಿ ಮಂತ್ರಾಲಯವು ಒಂದು. ಮಂತ್ರಾಲಯವು ಆಂಧ್ರಪ್ರದೇಶದಲ್ಲಿ ಇದ್ದರೂ ಕೂಡ ಇಲ್ಲಿಗೆ ಕರ್ನಾಟಕದಿಂದ ಹೋಗುವ ಭಕ್ತಾದಿಗಳ ಸಂಖ್ಯೆಯೇ ಹೆಚ್ಚು. ದಿನೇ ದಿನೇ ಮಂತ್ರಾಲಯಕ್ಕೆ ಹೋಗುವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರವು ಮಂತ್ರಾಲಯಕ್ಕೆ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ.
ಹೌದು, ರಾಜಧಾನಿ ಬೆಂಗಳೂರಿನಿಂದ ರಾಯಚೂರು ಜಿಲ್ಲೆಗೆ ಹೊಂದಿಕೊಂಡಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯ (Mantralayam)ಕ್ಕೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ವಿಶೇಷ ಪ್ರವಾಸ ಪ್ಯಾಕೇಜ್ (Bengaluru-Mantralay Tour Packages) ಘೋಷಿಸಿದೆ. ಈ ಬಸ್ ಮಾರ್ಗ, ಟಿಕೆಟ್ ದರ, ಸಮಯ, ದರ್ಶನ ಹಾಗೂ ಇತರ ವ್ಯವಸ್ಥೆಯ ಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಕ್ತರು ಮತ್ತು ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಇಲಾಖೆ ಬೆಂಗಳೂರಿನ ಯಶವಂತಪುರದಿಂದ ನೇರವಾಗಿ ಮಂತ್ರಾಲಯಕ್ಕೆ ಟೂರ್ ಪ್ಯಾಕೇಜ್ ಪರಿಚಯಿಸಿದೆ. ಮಧ್ಯಾಹ್ನದ ಊಟು ಸಹಿತ ಒಟ್ಟು ಎರಡು ದಿನದ ಪ್ಯಾಕೇಜ್ ಇದಾಗಿದೆ.
ಟಿಕೆಟ್ ದರವೆಷ್ಟು?
ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್‌ನಲ್ಲಿ ಪ್ರತಿಯೊಬ್ಬರಿಗೆ ತಲಾ 2,780 ರೂಪಾಯಿ ಟಿಕೆಟ್ ದರವನ್ನು ಇಲಾಖೆ ನಿಗದಿಪಡಿಸಿದೆ. ಹಿರಿಯ ನಾಗರಿಕರಿಗೆ ಇಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ.
ಪ್ರಯಾಣದ ವಿವರ:
ಬುಧವಾರ ಹಾಗೂ ಶುಕ್ರವಾರ ರಾತ್ರಿ ಬೆಂಗಳೂರಿನ ನಿಗದಿತ ಸ್ಥಳದಿಂದ ಪ್ರವಾಸೋದ್ಯಮ ಇಲಾಖೆಯ ಬಸ್ ಹೊರಡುತ್ತದೆ. ಮಾರನೇ ದಿನ ಕ್ರಮವಾಗಿ ಗುರುವಾರ ಹಾಗೂ ಶನಿವಾರ ಬೆಳಗ್ಗೆ ಮಂತ್ರಾಲಯವನ್ನು ತಲುಪುತ್ತದೆ. ಪ್ರತಿ ಬುಧವಾರ ಹಾಗೂ ಶುಕ್ರವಾರ ರಾತ್ರಿ 08 ಗಂಟೆಗೆ ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಹೊರಡುತ್ತದೆ. ಭಕ್ತರು ಇಲ್ಲಿಗೆ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಮೂಲಕ ನಿಗದಿತ ಸಮಯಕ್ಕೆ ಬಂದು ಸೇರಬೇಕಿದೆ.
ಬುಕ್ಕಿಂಗ್ ಹೇಗೆ ಮಾಡಬೇಕು?
ಆಕ್ತರ ಪ್ರಯಾಣಿಕರು/ಪ್ರವಾಸಿಗರು ಪ್ರವಾಸೊದ್ಯಮ ಇಲಾಖೆಯ ಅಧಿಕೃತ ಜಾಲತಾಣದ ಈ https://kstdc.co/tour_packages/mantralaya-tour/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಥವಾ ದೂರವಾಣಿ 080-43344334 ಇಲ್ಲವೇ ಮೊಬೈಲ್ 8970650070 ಸಂಖ್ಯೆಗೆ ಕರೆ ಮಾಡಿ ವಿಚಾರಿಸಲೂ ಬಹುದಾಗಿದೆ.
ದೇವರ ದರ್ಶನದ ಸಮಯ ವಿವರ
ಬೆಳಗ್ಗೆ 4.30 ಗಂಟೆಯಿಂದ 6ರವರೆಗೆ ಪ್ರಯಾಣಿಕರಿಗೆ ಫ್ರೆಶ್ ಅಪ್ ಆಗಲು ಅವಕಾಶ ಇರುತ್ತದೆ. ನಂತರ 6.30 ರಿಂದ 10ಗಂಟೆ ಹೊತ್ತಿಗೆ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿಸಲಾಗುತ್ತದೆ. ನಂತರ ಬೆಳಗ್ಗೆ 11 ರಿಂದ 12 ಗಂಟೆವರೆಗೆ ಪಂಚಮುಖಿ ಆಂಜನೇಯ ದೇವರ ದರ್ಶನಕ್ಕೆ ಬಸ್ ಅಲ್ಲಿಗೆ ತೆರಳುತ್ತದೆ. ದರ್ಶನ ಬಳಿಕ ಮಧ್ಯಾಹ್ನ 1 ರಿಂದ 2 ಗಂಟೆ ವೇಳೆಗೆ ಊಟದ ವ್ಯವಸ್ಥೆ ಇರುತ್ತದೆ. ಊಟ ಮುಗಿಸಿಕೊಂಡು ಮಂತ್ರಾಲಯದಿಂದ ಬಸ್ ಹೊರಟು ಅದೇ ದಿನ ರಾತ್ರಿ 09 ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದು ಸೇರುತ್ತದೆ.
