Winter travel plan: ಚಳಿಗಾಲದಲ್ಲಿ ಪರಿಪೂರ್ಣ ಪ್ರವಾಸಕ್ಕೆ ವರ್ಷದ ಆರಂಭದಲ್ಲಿ ನೀವು ಕಡಿಮೆ ವೆಚ್ಚದಲ್ಲಿ ವಿದೇಶ ಪ್ರವಾಸ ಮಾಡಲು ಬಯಸಿದರೆ ವೀಸಾ ಇಲ್ಲದೇ ಈ ದೇಶಗಳಿಗೆ ಭೇಟಿ ಕೊಡಬಹುದು. ಸಾಮಾನ್ಯವಾಗಿ ವೀಸಾ ಪಡೆಯಲು ಕೆಲವೊಮ್ಮೆ ಬಹಳಷ್ಟು ದಾಖಲೆಗಳು ಅಗತ್ಯವಿರುತ್ತವೆ. ವೀಸಾಕ್ಕೆ ಅರ್ಜಿ ಸಲ್ಲಿಸಿದರೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಕೆಲವು ದೇಶಗಳಿಗೆ ವೀಸಾ ಇಲ್ಲದೆಯೂ ಪ್ರವಾಸಕ್ಕೆ ತೆರಳಬಹುದಾಗಿದೆ. ಈ ದೇಶಗಳಲ್ಲಿ ನೀವು ಉತ್ತಮ ಚಳಿಗಾಲದ ಪ್ರವಾಸಕ್ಕೆ ಪ್ಲಾನ್ ಮಾಡಬಹುದು. ಅದೂ ಕೂಡ ಕಡಿಮೆ ವೆಚ್ಚದಲ್ಲಿ ಪರಿಪೂರ್ಣವಾದ ಟೂರ್ ಮಾಡಬಹುದು. ಈ ದೇಶಗಳಲ್ಲಿ ವರ್ಣರಂಜಿತ ರಾತ್ರಿ ಜೀವನ, ರುಚಿಕರವಾದ ಆಹಾರಗಳು, ಸಾಹಸ ಚಟುವಟಿಕೆಗಳು ಹಾಗೂ ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ಸಾಧ್ಯವಾಗುತ್ತದೆ.
ಭೂತಾನ್: ಭೂತಾನ್ಗೆ ಭಾರತೀಯರಿಗೆ ವೀಸಾ ಇಲ್ಲದೆ ಪ್ರವೇಶವನ್ನು ನೀಡುತ್ತದೆ. ನವೆಂಬರ್ ತಿಂಗಳಿಂದ ಫೆಬ್ರವರಿವರೆಗೆ ಭೇಟಿ ನೀಡಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಇಲ್ಲಿನ ವಾತಾವರಣವು ಶಾಂತಿಯುತವಾಗಿರುತ್ತದೆ. ಈ ದೇಶಕ್ಕೆ ಬರುವ ಪ್ರವಾಸಿಗರು ಎಮಾ ದತ್ಶಿ, ಮೊಮೊಸ್, ಒಣಗಿದ ಮೆಣಸಿನಕಾಯಿಯಂತಹ ಭಕ್ಷ್ಯಗಳನ್ನು ಆನಂದಿಸುತ್ತಾರೆ. ಭೂತಾನ್‌ನಲ್ಲಿ ಬಜೆಟ್ ಪ್ರಕಾರ, ಹೋಂಸ್ಟೇಗಳ ದರ ₹4,000 ರಿಂದ ₹8,000 ವರೆಗೆ ಇರುತ್ತದೆ.
ಮಾಲ್ಡೀವ್ಸ್: ಭಾರತೀಯರು ಮಾಲ್ಡೀವ್ಸ್ಗೆ ವೀಸಾ ಇಲ್ಲದೆಯೇ ಭೇಟಿ ನೀಡಬಹುದು. ಜನವರಿಯಿಂದ ಫೆಬ್ರವರಿ ಅವಧಿಯಲ್ಲಿ ಮಾಲ್ಡೀವ್ಸ್ಗೆ ಭೇಟಿ ನೀಡಲು ಉತ್ತಮ. ಪ್ಯಾಡಲ್‌ಬೋರ್ಡಿಂಗ್ ಹಾಗೂ ಸೂರ್ಯಾಸ್ತದ ಕ್ರೂಸ್ ಅನ್ನು ಅನುಭವಿಸಬಹುದು. ಇಲ್ಲಿರುವ ವಿಶಿಷ್ಟ ಅಡುಗೆಗಳು ಖಂಡಿತವಾಗಿಯು ನಿಮ್ಮ ಹೃದಯವನ್ನು ಗೆಲ್ಲುತ್ತದೆ. ಇಲ್ಲಿ ಪ್ರತಿ ರಾತ್ರಿಗೆ ಹೋಟೆಲ್‌ಗಳ ದರವು ₹8,000 ರಿಂದ ₹50,000 ವರೆಗೆ ಇರುತ್ತದೆ.
ಥೈಲ್ಯಾಂಡ್: ಈ ಥೈಲ್ಯಾಂಡ್ ದೇಶವು 30 ದಿನಗಳವರೆಗೆ ವೀಸಾ ಇಲ್ಲದೇ ಪ್ರವೇಶವನ್ನು ನೀಡುತ್ತದೆ. ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಇಲ್ಲಿ ತಾಪಮಾನವು 25 ರಿಂದ 30 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಿಂದ ಥೈಲ್ಯಾಂಡ್‌ಗೆ ವಿಮಾನಗಳು ಸುಲಭವಾಗಿ ಲಭ್ಯ ಇವೆ. ಕಡಿಮೆ ಬಜೆಟ್‌ನಿಂದ ಐಷಾರಾಮಿವರೆಗೆ ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಇಲ್ಲಿವೆ.
ಮಾರಿಷಸ್: ಚಳಿಗಾಲದ ಪ್ರವಾಸಕ್ಕೆ ವೀಸಾ ರಹಿತವಾಗಿ ತೆರಳಲು ಮಾರಿಷಸ್ ಉತ್ತಮ ತಾಣಗಳಲ್ಲಿ ಒಂದಾಗಿದೆ. ಬೆಳಗಿನ ಎಳೆ ಬಿಸಿಲು ಮತ್ತು ಮಧ್ಯಾಹ್ನದ ಲಘು ಮಳೆಯು ನಿಮ್ಮ ಪ್ರವಾಸಕ್ಕೆ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ಪ್ರಮುಖ ಭಾರತೀಯ ನಗರಗಳಿಂದ ನೇರ ವಿಮಾನಗಳು ಸುಮಾರು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇಲ್ಲಿನ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳಲ್ಲಿ ದರ ₹4,000 ರಿಂದ ₹15,000 ವರೆಗೆ ಇರುತ್ತದೆ.
ಸೀಶೆಲ್ಸ್: ಭಾರತೀಯರಿಗೆ ಸೀಶೆಲ್ಸ್ 90 ದಿನಗಳವರೆಗೆ ವೀಸಾ ಇಲ್ಲದೇ ಪ್ರವೇಶವನ್ನು ನೀಡುತ್ತದೆ. ದೆಹಲಿ ಮತ್ತು ಮುಂಬೈನಂತಹ ಪ್ರಮುಖ ನಗರಗಳಿಂದ ವಿಮಾನಗಳು ಇಲ್ಲಿಗೆ ತಲುಪಲು ಸುಮಾರು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಸೀಶೆಲ್ಸ್‌ನಲ್ಲಿ ಬೆರಗುಗೊಳಿಸುವ ಕಡಲತೀರಗಳು, ಸ್ಥಳೀಯ ಕೆಫೆಗಳು ಮತ್ತು ನೀರಿನ ಕ್ರೀಡೆಗಳನ್ನು ಆನಂದಿಸಬಹುದು. ಇಲ್ಲಿನ ಅತಿಥಿಗೃಹಗಳು ₹5,000 ರಿಂದ ಪ್ರಾರಂಭವಾಗುತ್ತವೆ. ಐಷಾರಾಮಿ ರೆಸಾರ್ಟ್‌ಗಳಿಗೆ ₹25,000 ವರೆಗೆ ವೆಚ್ಚವಾಗುತ್ತದೆ.
ಮಲೇಷ್ಯಾ: ಭಾರತೀಯರಿಗೆ ಮಲೇಷ್ಯಾ 90 ದಿನಗಳವರೆಗೆ ವೀಸಾ ಇಲ್ಲದೇ ಪ್ರವೇಶವನ್ನು ನೀಡುತ್ತದೆ. ಡಿಸೆಂಬರ್ ಹಾಗೂ ಫೆಬ್ರವರಿ ನಡುವೆ ಇಲ್ಲಿ ತಾಪಮಾನವು 24 ರಿಂದ 30 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ಇಲ್ಲಿಗೆ ಭೇಟಿ ನೀಡಲು ಇದು ಉತ್ತಮ ಸಮಯವಾಗಿದೆ ಎಂದು ಹೇಳಲಾಗುತ್ತದೆ. ಕೌಲಾಲಂಪುರದ ಪೆಟ್ರೋನಾಸ್ ಟವರ್‌ಗಳು, ಪೆನಾಂಗ್‌ನ ಜಾರ್ಜ್‌ಟೌನ್‌ನ ಪಾರಂಪರಿಕ ಬೀದಿಗಳು, ಲಂಗ್ಕಾವಿಯ ಕಡಲತೀರಗಳನ್ನು ನೋಡಿ ಆನಂದಿಸಬಹುದು. ಮಲೇಷ್ಯಾದಲ್ಲಿ ಕೈಗೆಟುಕುವ ವಸತಿಗೃಹಗಳು ₹2,500ರಿಂದ ಆರಂಭವಾಗುತ್ತವೆ.
ಶ್ರೀಲಂಕಾ: ಭಾರತೀಯರಿಗೆ ಶ್ರೀಲಂಕಾ ಕೂಡ 90 ದಿನಗಳವರೆಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತದೆ. ಜನವರಿಯಿಂದ ಫೆಬ್ರವರಿವರೆಗೆ ಇಲ್ಲಿನ ತಾಪಮಾನವು 28 ರಿಂದ 30 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ ಜೊತೆಗೆ ಲಘು ಮಳೆಯು ಹವಾಮಾನವನ್ನು ಇನ್ನಷ್ಟು ಆಹ್ಲಾದಕರಗೊಳಿಸುತ್ತದೆ. ಇಲ್ಲಿನ ಅತಿಥಿಗೃಹಗಳಿಗೆ 2,500 ರಿಂದ 5,000 ರೂಪಾಯಿಗಳವರೆಗೆ ವೆಚ್ಚವಾಗುತ್ತವೆ. ಬೀಚ್ ರೆಸಾರ್ಟ್‌ಗಳಿಗೆ 8,000 ರೂಪಾಯಿವರೆಗೆ ವೆಚ್ಚವಾಗಬಹುದು.
ನೇಪಾಳ: ನೇಪಾಳ ಕೂಡ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತದೆ. ನೀವು ವಿಮಾನ ಮತ್ತು ರಸ್ತೆಯ ಮೂಲಕ ಇಲ್ಲಿಗೆ ತಲುಪಬಹುದು. ಇಲ್ಲಿನ ಪ್ರವಾಸಿಗರು ಹೆಚ್ಚಾಗಿ ಪಶುಪತಿನಾಥ ಮತ್ತು ಬೌಧನಾಥ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ₹1,500ಕ್ಕಿಂತ ಕಡಿಮೆ ಬೆಲೆಯಲ್ಲಿ ರೂಮ್ ದೊರೆಯುತ್ತವೆ. ಮತ್ತು ಐಷಾರಾಮಿ ಹೋಟೆಲ್‌ಗಳಿಗೆ ₹10,000ವರೆಗೆ ಖರ್ಚು ಆಗುತ್ತದೆ.
