Weather report: ರಾಜ್ಯದಲ್ಲಿ ಶೀತ ಅಲೆಯ ಆರ್ಭಟ ಜೋರಾಗಿದೆ. ಮೋಡ ಕವಿದ ವಾತಾವರಣ ಸಹಿತ ತೇವ ಭರಿತ ಗಾಳಿ ಬೀಸುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ತಾಪಮಾನ ಕಡಿಮೆ ಆಗಿದ್ದು, ಮೈಕೊರೆವ ಚಳಿ ಹೆಚ್ಚಾಗಿದೆ.
ಮುಂದಿನ ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ.ಭಾರತೀಯ ಹವಾಮಾನ ಇಲಾಖೆಯ (IMD) ಕರ್ನಾಟಕ ಕೇಂದ್ರದ ಪ್ರಕಾರ, ಉತ್ತರ ಒಳನಾಡಿನಲ್ಲಿ ಚಳಿ ಮುಂದುವರಿಯಲಿದೆ. ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಕೊಂಚ ಚಳಿ ತಗ್ಗಿದೆ ಎನ್ನಬಹುದು. ಆದರೂ ಸಮಾನಧಾನಕರ ಅಲ್ಲದ ಸ್ಥಿತಿ ಇಲ್ಲಿದೆ. ಇಂದು ಸೋಮವಾರ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನ ಮತ್ತಷ್ಟು ಕುಸಿಯುವ ನಿರೀಕ್ಷೆ ಇದೆ. ಈ ಭಾಗಗಳಲ್ಲಿ ಹೆಚ್ಚಿನ ಚಳಿ ಆವರಿಸುವ ಕಾರಣಕ್ಕೆ ಇಂದು ಯೆಲ್ಲೋ ಅಲರ್ಟ್ ಘೋಷಿಸಿ ಶೀತ ಗಾಳಿಯ ಮುನ್ನೆಚ್ಚರಿಕೆ ಕೊಡಲಾಗಿದೆ.
ಉಳಿದಂತೆ ಹಾವೇರಿ, ಧಾರವಾಡ, ದಾವಣಗೆರೆ, ಕೊಪ್ಪಳ, ಗದಗ, ಬೆಳಗಾವಿ, ವಿಜಯಪುರ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಭಾಗಗಳಲ್ಲೂ ಹಗಲು ಒಣಹವೆ ಕಂಡು ಬರುತ್ತಿದೆ. ಗರಿಷ್ಠ ತಾಪಮಾನದಲ್ಲಿ ನಿಧಾನವಾಗಿ ಏರಿಕೆ ಆಗುತ್ತಿದೆ. ಆದರೆ ಬೆಳಗ್ಗೆ ಮತ್ತು ರಾತ್ರಿ ಅಧಿಕ ಚಳಿ ಅನುಭವವಾಗುತ್ತಿದೆ. ಇಲ್ಲಿ ಕಡಿಮೆ ಕನಿಷ್ಠ ತಾಪಮಾನ ದಾಖಲಾತಿ ಮುಂದುವರಿದಿದೆ.
