Home » ಬೆಲೆ ಗಗನಕ್ಕೇರಿರುವ ಟೊಮ್ಯಾಟೊ ಗೆ ಇಬ್ಬರು ಬಲಿ !! |ತೋಟದಲ್ಲಿಯೇ ನಡೆಯಿತು ಈ ಘೋರ ದುರಂತ

ಬೆಲೆ ಗಗನಕ್ಕೇರಿರುವ ಟೊಮ್ಯಾಟೊ ಗೆ ಇಬ್ಬರು ಬಲಿ !! |ತೋಟದಲ್ಲಿಯೇ ನಡೆಯಿತು ಈ ಘೋರ ದುರಂತ

by ಹೊಸಕನ್ನಡ
0 comments

ಟೊಮ್ಯಾಟೊ ತೋಟಕ್ಕೆ ರೈತರೊಬ್ಬರು ಅಳವಡಿಸಿದ್ದ ವಿದ್ಯುತ್ ಬೇಲಿಗೆ ಯುವಕನೊಬ್ಬ ಬಲಿಯಾಗಿದ್ದು, ಸಿಟ್ಟಿಗೆದ್ದ ಮೃತನ ಕುಟುಂಬಸ್ಥರು ತೋಟದ ಮಾಲೀಕನಿಗೆ ಮನಸೋ ಇಚ್ಛೆ ಹಲ್ಲೆ ಮಾಡಿ ಆತನನ್ನು ಅಮಾನವೀಯವಾಗಿ ಹೊಡೆದು ಕೊಂದ ಘಟನೆ ಗೌರಿಬಿದನೂರು ತಾಲೂಕಿನ ಚಿರಕಮಟ್ಟೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಚಿರಕಮಟ್ಟೇನಹಳ್ಳಿ ಗ್ರಾಮದಲ್ಲಿ ಚಿಕ್ಕಹುಸೇನಪುರ ಗ್ರಾಮದ ರೈತ ಅಶ್ವತ್ಥರಾವ್ ಎಂಬುವರಿಗೆ ಸೇರಿದ ಜಮೀನಿದೆ. ಇದರಲ್ಲಿ ಅಶ್ವತ್ಥರಾವ್ ಟೊಮ್ಯಾಟೊ ಬೆಳೆದಿದ್ದಾರೆ. ಟೊಮ್ಯಾಟೊ ದರ ಹೆಚ್ಚಾಗಿದ್ದರಿಂದ ಬೆಳೆ ರಕ್ಷಣೆಗೆಂದು ವಿದ್ಯುತ್ ಬೇಲಿ ಅಳವಡಿಸಿಕೊಂಡಿದ್ದರು. ಆದರೆ ಇದು ಅಕ್ರಮವಾಗಿ ಅಳವಡಿಸಿಕೊಂಡದ್ದು ಎನ್ನಲಾಗಿದೆ.

ಬುಧವಾರ ರಾತ್ರಿ ಚಿರಕಮಟ್ಟೇನಹಳ್ಳಿ ಗ್ರಾಮದ ಯುವ ರೈತ ವಸಂತರಾವ್(29) ಎಂಬುವರು ವಿದ್ಯುತ್ ಬೇಲಿಯ ಅರಿವಿಲ್ಲದೆ ಆಕಸ್ಮಿಕವಾಗಿ ಟೊಮ್ಯಾಟೊ ತೋಟಕ್ಕೆ ಹೋಗಿದ್ದು, ಈ ವೇಳೆ ವಿದ್ಯುತ್ ಪ್ರವಹಿಸಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಸಂತರಾವ್‌ನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಮೃತನ ಕುಟುಂಬಸ್ಥರು ಮತ್ತು ಸಂಬಂಧಿಕರು ರೊಚ್ಚಿಗೆದ್ದು ಇಂದು ಬೆಳಗ್ಗೆ ತೋಟದ ಮಾಲೀಕ ಅಶ್ವತ್ಥರಾವ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಅಶ್ವತ್ಥರಾವ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಗ್ರಾಮದಲ್ಲಿ ಇದೀಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿದ್ದಾರೆ.

You may also like

Leave a Comment