Mangalore:ಆಟೋ ರಿಕ್ಷಾವೊಂದು ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಯುವತಿಯೋರ್ವಳು ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆಯು ನಗರದ ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರ ಬಳಿಯಲ್ಲಿ ನಡೆದಿದೆ(Mangalore).
ಇಲ್ಲಿನ ಬಂಗ್ಲೆಗುಡ್ಡೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಯುವತಿಯನ್ನು ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ(25) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಆಕೆಯ ತಾಯಿ ಮೀನಾಕ್ಷಿ(55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ (37), ಬಾಲಕ ಭವಿಷ್ (09) ಹಾಗೂ ಚಾಲಕ ಪದ್ಮನಾಭ ಎಂದು ಗುರುತಿಸಲಾಗಿದೆ.
ಮೃತ ಯುವತಿ ಪ್ರೀತಿಗೆ ಕಳೆದ ಕೆಲ ತಿಂಗಳುಗಳ ಹಿಂದೆ ಮದುವೆ ನಿಶ್ಚಿತವಾಗಿದ್ದು, ಮುಂದಿನ ವರ್ಷ ಜನವರಿಯಲ್ಲಿ ಮದುವೆ ಕಾರ್ಯ ನಡೆಯುವುದರಲ್ಲಿತ್ತು. ಅದರ ಪೂರ್ವ ತಯಾರಿಯಲ್ಲಿದ್ದ ಕುಟುಂಬ ಸದಸ್ಯರು ಗುರುಪುರ ಪೇಟೆಗೆ ಬರುವ ಸಲುವಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಗಾಯಲುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
