ಧರ್ಮಸ್ಥಳ: ಮಡಪ್ಪಾಡಿ ಗ್ರಾಮ ಸಂಪರ್ಕಿಸುವ ಸೇವಾಜೆ-ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ ಮತ್ತೆ 50 ಲಕ್ಷ ರೂ ಶೀಘ್ರ ಬಿಡುಗಡೆ ಮಾಡುವುದಾಗಿ ರಾಜ್ಯ ಪಂಚಾಯತ್ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದ್ದಾರೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದ ಪತ್ರಕರ್ತರ ಸಂಘದ ನಿಯೋಗ ಜ.17 ರಂದು ಧರ್ಮಸ್ಥಳದಲ್ಲಿ ಭೇಟಿಯಾಗಿ ರಸ್ತೆ ಅಭಿವೃದ್ಧಿಗೆ ಘೋಷಣೆ ಮಾಡಿದ ಉಳಿದ ಹಣವನ್ನು ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.ಬೆಂಗಳೂರಿಗೆ ತೆರಳಿದ ತಕ್ಷಣ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಡಪ್ಪಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಮಡಪ್ಪಾಡಿ ಸಂಪರ್ಕಿಸುವ ಮುಖ್ಯ ರಸ್ತೆ ಸೇವಾಜೆ-ಮಡಪ್ಪಾಡಿ ರಸ್ತೆ ಅಭಿವೃದ್ಧಿ ಮಾಡಬೇಕೆಂಬ ಬೇಡಿಕೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಪತ್ರಕರ್ತರ ಸಂಘದ ಮನವಿಯ ಹಿನ್ನಲೆಯಲ್ಲಿ ಸಚಿವ ಈಶ್ವರಪ್ಪ ರಸ್ತೆ ಅಭಿವೃದ್ಧಿಗೆ ಎರಡು ಕೋಟಿ ಅನುದಾನವನ್ನು ಘೋಸಿಸಿದ್ದರು. ಬಳಿಕ 1.5 ಕೋಟಿ ಅನುದಾನ ಬಿಡುಗಡೆಯಾಗಿ ಜ.11ರಂದು ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿತ್ತು. ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಸಲು ಉಳಿದ 50 ಲಕ್ಷವನ್ನು ಕೂಡ ಬಿಡುಗಡೆ ಮಾಡಬೇಕೆಂದು ಇಂದು ಮನವಿ ಸಲ್ಲಿಸಲಾಯಿತು. ರಸ್ತೆ ಕಾಮಗಾರಿ ಪೂರ್ತಿಯಾಗುವ ಸಂದರ್ಭದಲ್ಲಿ ರಸ್ತೆಯ ಉದ್ಘಾಟನೆಗೆ ಆಗಮಿಸುವಂತೆ ಸಚಿವರಿಗೆ ಆಹ್ವಾನ ನೀಡಲಾಯಿತು. ಪತ್ರಕರ್ತರ ಸಂಘ ಗ್ರಾಮ ವಾಸ್ತವ್ಯ ಮಾಡಿದ ಕಡಬ ತಾಲೂಕಿನ ಕೊಂಬಾರು ಗ್ರಾಮದ ರಸ್ತೆ ಅಭಿವೃದ್ಧಿಗೆ ಮೂರು ಕೋಟಿ ರೂ. ಅನುದಾನ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು. ಇದನ್ನು ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.
