ಇತ್ತೀಚೆಗಷ್ಟೇ ಮಂಗಳೂರು ವಿಮಾನ ನಿಲ್ದಾಣದಲ್ಲಿ, ಬಳಕೆದಾರರ ಶುಲ್ಕವನ್ನು ಹೆಚ್ಚಿಸಲು ಅದಾನಿ ಸಂಸ್ಥೆ ನಿರ್ಧಾರ ಮಾಡಿತ್ತು. ಹಾಗೂ ಪ್ರಸ್ತಾವನೆಯನ್ನು ವಿಮಾನಯಾನ ಸಂಸ್ಥೆಗಳ ಮುಂದಿಟ್ಟಿದ್ದವು. ಆದರೆ ಅದಾನಿ ಒಡೆತನದ ಮಂಗಳೂರು ವಿಮಾನ ನಿಲ್ದಾಣದ ಪ್ರಸ್ತಾಪವನ್ನು ವಿಮಾನಯಾನ ಸಂಸ್ಥೆಗಳು ವಿರೋಧಿಸಿವೆ. ಇದು ಕೊರೊನಾದಿಂದ ಉಂಟಾದ ಹಾನಿಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದ್ದು, ಏರ್ಲೈನ್ಗಳು ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದಾಗಿ, ಅದಾನಿ ಸಂಸ್ಥೆಗೆ ಹಿನ್ನಡೆಯಾಗಿದೆ ಎಂದೇ ಹೇಳಬಹುದು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿಲ್ದಾಣದಿಂದ ನಿರ್ಗಮಿಸುವ ಪ್ರಯಾಣಿಕರ ಮೇಲಿನ ಶುಲ್ಕ ಹೆಚ್ಚಿಸಲು ಹೊರಟಿದ್ದ ಏರ್ಪೋರ್ಟ್ವಿಮಾನ ನಿಲ್ದಾಣದ ಪ್ರಸ್ತಾಪಕ್ಕೆ ವಿಮಾನಯಾನ ಸಂಸ್ಥೆಗಳ ವಿರೋಧ ವ್ಯಕ್ತವಾಗಿದೆ.
ಇಂಡಿಗೋ, ಸ್ಪೈಸ್ಜೆಟ್ ಮತ್ತು ಗೋ ಫಸ್ಟ್ ನ್ನು ಒಳಗೊಂಡಿರುವ ಇಂಡಿಯನ್ ಏರ್ಲೈನ್ಸ್ ಫೆಡರೇಶನ್ (FIA), ವಿಮಾನ ನಿಲ್ದಾಣವು ಬಳಕೆದಾರರ ಶುಲ್ಕ ಹೆಚ್ಚಿಸುವ ಬದಲು ಏರೋನಾಟಿಕಲ್ ಅಲ್ಲದ ಮೂಲಗಳಿಂದ ತನ್ನ ಆದಾಯವನ್ನು ಹೆಚ್ಚಿಸಬೇಕು ಎಂಬ ಸಲಹೆ ನೀಡಿದೆ ಎನ್ನಲಾಗಿದೆ.
ಮಂಗಳೂರು ವಿಮಾನ ನಿಲ್ದಾಣವು ಮುಂದಿನ ಐದು ವರ್ಷಗಳ ಅವಧಿಗೆ ಪ್ರಯಾಣಿಕರ ಹಾಗೂ ವಿಮಾನಗಳ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕವನ್ನು ಶೇ. 49 74ರಷ್ಟು ಹೆಚ್ಚಿಸುವಂತೆ ಕೋರಿತ್ತು. ಅಲ್ಲದೆ ಇದು ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರಿಗೆ ಬಳಕೆದಾರರ ಶುಲ್ಕವನ್ನು ವಿಧಿಸಲು ಅನುಮತಿಯನ್ನು ಕೋರಿತ್ತು. ಸಾಮಾನ್ಯವಾಗಿ ಆಗಮಿಸುವ ಪ್ರಯಾಣಿಕರಿಗೆ ಶುಲ್ಕವನ್ನು ವಿಧಿಸುವ ಕ್ರಮವಿಲ್ಲ.
ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣ ನಿರ್ವಾಹಕ ಸಂಸ್ಥೆಯಾಗಿರುವ ಅದಾನಿಗೆ ತನ್ನ ವ್ಯವಸ್ಥೆಯಲ್ಲಿ ಮತ್ತಷ್ಟು ಬದಲಾವಣೆ ಮಾಡಲು ಎಇಆರ್ಗೆ ಸೂಚಿಸುವಂತೆ ಮನವಿಯೊಂದನ್ನು ಮಾಡಿದೆ.
