Udupi: ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಆಕ್ರಮ ಸಾಗಣೆ ವಿರುದ್ಧ ದಿನಾಚರಣೆಯ ಅಂಗವಾಗಿ ಗುರುವಾರ ನಂದಿಕೂರಿನ ಆಯುಷ್ ಎನ್ವಿರೋಟಿಕ್ ಘಟಕದಲ್ಲಿ ಉಡುಪಿ (Udupi) ಜಿಲ್ಲಾ ಪೊಲೀಸರು ವಿವಿಧ ಠಾಣೆಗಳಲ್ಲಿ ವಶ ಪಡಿಸಿಕೊಂಡ ಸುಮಾರು 3.80ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಿಲೇವಾರಿ ಮಾಡಲಾಯಿತು.
ಜಿಲ್ಲೆಯ ವಿವಿಧ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 2015ರಿಂದ 2023ರವರೆಗಿನ ಅವಧಿಯಲ್ಲಿ ಪೊಲೀಸ್ ವಶವಾಗಿದ್ದ ಆರು ಮಾದಕ ದ್ರವ್ಯ ವಶ ಪ್ರಕರಣಗಳಲ್ಲಿನ ಸುಮಾರು 3.80ಲಕ್ಷ ರೂ. ಮೌಲ್ಯದ ಗಾಂಜಾ, ಅಫೀಮು ಹಾಗೂ ಎಂಡಿಎoಎ ಮಾತ್ರೆಗಳನ್ನು ನ್ಯಾಯಾಲಯದ ತೀರ್ಪಿನ ಬಳಿಕ ನಾಶಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದರು.
ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 32800ರೂ. ಬೆಲೆಯ 3.138ಕೆಜಿ ಗಾಂಜಾ, 36.259ಗ್ರಾಂ ತೂಕದ ಸುಮಾರು 2ಲಕ್ಷ ರೂ. ಮೌಲ್ಯದ ಎಂಡಿಎoಎ ಹಾಗೂ 1 ಲಕ್ಷ 47200ರೂ. ಬೆಲೆಯ 368ಗ್ರಾಂ ಅಫೀಮು ಒಳಗೊಂಡಿರುವುದಾಗಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಎಡಿಷನಲ್ ಎಸ್ಪಿ ಪರಮೇಶ್ವರ ಹೆಗಡೆ, ಕಾರ್ಕಳ ಎಎಸ್ಪಿ ಹರ್ಷಾ ಪ್ರಿಯಂವದಾ, ಉಡುಪಿ ಡಿವೈಎಸ್ಪಿ ಪ್ರಭು ಡಿ. ಟಿ., ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರಿ ಠಾಣಾ ಪಿಎಸ್ಐ ಶಕ್ತಿವೇಲು ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
