Pink perch fish: ಕರಾವಳಿ-ಮಂಗಳೂರು ಎಂದಾಕ್ಷಣ ಕ್ಷಣದಲ್ಲೇ ನೆನಪಾಗುವುದು ಇಲ್ಲಿನ ಕಲೆ, ಸಂಸ್ಕೃತಿ, ಆಚಾರ-ವಿಚಾರ ಜೊತೆಗೆ ಮೀನೂಟ. ಕಡಲ ತಡಿಯ ಕರಾವಳಿಯ ಮೀನುಗಾರಿಕೆ, ಮೀನಿನ ಖಾದ್ಯ ಎಲ್ಲೆಡೆ ಹೆಚ್ಚು ಪ್ರಚಾರ ಪಡೆದಿದ್ದು, ದೂರದೂರುಗಳಿಂದ ಮಂಗಳೂರ ಭೇಟಿ ಮಾಡುವ ಮಂದಿ ಮೀನು ಸವಿಯದೆ ಹಿಂದಿರುಗುವ ಸಂಗತಿ ಬಲು ಕಡಿಮೆ.ಇಂತಹ ಕರಾವಳಿಯಲ್ಲಿ ಅಂಜಲ್, ಬಂಗುಡೆ, ಮದಿಮ್ಮಲ್ ಮೀನು ಹೆಚ್ಚು ಮಾರಾಟವಾಗುದರೊಂದಿಗೆ ಬೆಲೆಯಲ್ಲೂ ಉನ್ನತ ಸ್ಥಾನಕ್ಕೇರಿ ಕುಳಿತಿದ್ದು ಸದ್ಯದ ಪರಿಸ್ಥಿತಿಯಲ್ಲಿ ಮದಿಮ್ಮಲ್ ಮೀನು ವಿದೇಶಕ್ಕೆ ರಫ್ತು ಆಗದೆ ತವರಲ್ಲೇ ತಂಗಿದೆ ಎನ್ನುವ ಬೇಸರದ ಸುದ್ದಿ ಮೀನುಗಾರರಲ್ಲಿ ನಿರಾಸೆ ಮೂಡಿಸಿದ್ದು, ಮಾಲೀಕರನ್ನು ನಷ್ಟದಲ್ಲಿ ಸಿಲುಕಿಸಿದೆ ಎನ್ನಲಾಗಿದೆ.

ಆಂಗ್ಲ ಭಾಷೆಯಲ್ಲಿ pink perch ಎಂದು ಕರೆಯಲ್ಪಡುವ ಮದಿಮ್ಮಲ್ (ರಾಣಿ)ಮೀನು (Pink perch fish) ಸಿಗಡಿ, ಏಡಿ ಮುಂತಾದ ಮೀನಿನ ಮಾಂಸದ ರೀತಿಯಲ್ಲಿ ಹೆಚ್ಚಾಗಿ ವಿದೇಶಕ್ಕೆ ರಫ್ತು ಮಾಡಲಾಗುತ್ತಿದ್ದ ಮೀನಿಗೆ ಸದ್ಯ ಬೇಡಿಕೆ ತೀರಾ ಕುಸಿದಿದೆ ಎನ್ನಲಾಗಿದ್ದು,ಬೇಡಿಕೆ ಕಡಿಮೆಯಾಗಲು ಕಾರಣ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎನ್ನುತ್ತಾರೆ ಮೀನುಗಾರರ ಸಹಿತ ಬೋಟ್ ಮಾಲೀಕರು.
ಕರಾವಳಿಯಲ್ಲಿ ಈ ಬಾರಿ ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವಾತಾವರಣ ಬಿಸಿ ಏರಿದ್ದ ಕಾರಣ ನೀರಿನ ಮಟ್ಟ ಕುಸಿದಿದ್ದು, ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಶುಚಿಗೊಳಿಸಿ ಪ್ಯಾಕ್ ಮಾಡಲು ಆಗುತ್ತಿಲ್ಲ ಎನ್ನುವ ಕಾರಣ ನೀಡಿದ ಎಜೇಂಟ್ ಗಳು ಮೀನು ಖರೀದಿ ಹಾಗೂ ರಫ್ತ್ತು ನಿಲ್ಲಿಸಲಾಗಿದೆ ಎಂದಿದ್ದು, ಇದಕ್ಕೆ ಬೋಟ್ ಮಾಲೀಕರ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ.ನೀರಿನ ಸಮಸ್ಯೆಗೆ ಕೆಲವೊಂದು ಪರ್ಯಾಯ ವ್ಯವಸ್ಥೆಗಳಿದ್ದರೂ ಶುಚಿಗೊಳಿಸುವ ಬಗೆಗಿನ ಕಾರಣ ನೀಡಿ ಏಕಾಏಕಿ ದರ ಕಡಿತ ಮಾಡುವುದರ ಹಿಂದೆ ಷಡ್ಯಂತ್ರ ಇದೆ ಎನ್ನುವ ಆರೋಪ ಕೇಳಿ ಬಂದಿದೆ.
ಮೀನುಗಾರಿಕಾ ಕ್ಷೇತ್ರದಲ್ಲಿ ಅಂಜಲ್ ಬಿಟ್ಟರೆ ಆದಾಯ ತರುವ ಮೀನುಗಳಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದ ಮದಿಮ್ಮಲ್ ಏಕಾಏಕಿ ದರದಲ್ಲಿ ಕುಸಿತ ಕಂಡಿರುವುದು ನಿಜಕ್ಕೂ ಬೇಸರದ ಸಂಗತಿ. ಸುಮಾರು 10 ರಿಂದ 12 ದಿನಗಳ ಮೀನುಗಾರಿಕೆಯಲ್ಲಿ ಏಳರಿಂದ ಎಂಟು ಲಕ್ಷ ಆದಾಯ ತಂದು ಕೊಡಬಲ್ಲ ಮೀನು ಇದಾಗಿದ್ದು, ಬೇಸಿಗೆಯಲ್ಲಿ ಮೀನು ಆಳ ಸಮುದ್ರಕ್ಕೆ ಇಳಿಯುವುದರಿಂದ ಮೀನುಗಾರಿಕೆ ಕಷ್ಟಸಾಧ್ಯವಾಗಿದ್ದು, ಈ ನಡುವೆ ಬೆಲೆಯೂ ಕುಸಿತಗೊಂಡಿರುವುದು ಮೀನುಗಾರರ ಸಹಿತ ಕಡಲ ಕಿನಾರೆಯಲ್ಲಿ ಲಂಗರು ಹಾಕಿರುವ ಬೋಟ್ ಮಾಲೀಕರಲ್ಲಿ ಬೇಸರ ಮೂಡಿಸಿದೆ.
ಇದನ್ನೂ ಓದಿ: Police Case: ತನ್ನ 6 ವರ್ಷದ ಮಗುವಿನ ಕಿಡ್ನ್ಯಾಪ್ ಕೇಸ್ ದಾಖಲಿಸಿದ ಪೋಷಕರು! ಅಷ್ಟಕ್ಕೂ ಮಗು ಎಲ್ಲಿತ್ತು ಗೊತ್ತಾ?
