Udupi: ಉಡುಪಿಯ (Udupi) ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಸುಧಾಕರ ಪೂಜಾರಿ ಅವರ ಪುತ್ರಿ ಚೈತ್ರಾ ಕಂಡ ಕನಸಿನಲ್ಲೂ ನಿಸ್ವಾರ್ಥ ಕೂಡಿತ್ತು ಅಂದರೆ ತಪ್ಪಾಗಲಾರದು. ಯಾಕೆಂದರೆ ಅವಳು ಕಂಡ ಕನಸು ನಮ್ಮ ನಾಡಿನ ರಕ್ಷಣೆಗಾಗಿ ಆಗಿತ್ತು. ಆದರೆ ಇದೀಗ ಈ ಯುವತಿ ರಸ್ತೆ ಅಪಘಾತದಿಂದಾದ ಗಾಯದ ತೀವ್ರತೆ ಅಂದಾಜಿಸದೆ ತಪ್ಪಾಗಿ ಚಿಕಿತ್ಸೆ ನೀಡಿದ ವೈದ್ಯರಿಂದಾಗಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ.
ಹೌದು, ಚೈತ್ರಾ ಅವರಿಗೆ ಬಾಲ್ಯದಿಂದಲೇ ಸೇನೆ ಸೇರುವ ಆಸೆ ಇತ್ತು. ಅದಕ್ಕಾಗಿ ಬಿಎ ಪದವಿ ಮುಗಿದ ಬಳಿಕ ಪೂರಕ ತರಬೇತಿಯನ್ನೂ ಪಡೆದು, ಕುಂದಾಪುರದ ತೆಕ್ಕಟ್ಟೆಯಲ್ಲಿರುವ ತೆಕ್ಕಟ್ಟೆ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಉಚಿತ ದೈಹಿಕ ತರಬೇತಿ ಶಿಬಿರಕ್ಕೆ ಸೇರಿದ್ದರು. ಅಲ್ಲದೇ ಮಾಜಿ ಸೈನಿಕ ರವಿಚಂದ್ರ ಶೆಟ್ಟಿ ಅವರಿಂದ ತರಬೇತಿ ಪಡೆಯುತ್ತಿದ್ದರು.
ಆದರೆ 2021ರ ನವೆಂಬರ್ 15ರಂದು ತಮ್ಮನ ಜತೆ ಚೈತ್ರಾ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ವಾಹನವೊಂದು ಡಿಕ್ಕಿಯಾಗಿ ಮೊಣಕಾಲಿಗೆ ಗಾಯವಾಗಿತ್ತು. ಆದ್ದರಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಪ್ರತಿಷ್ಠಿತ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿನ ವೈದ್ಯರು ಮೂಳೆ ಮುರಿತ, ನರಕ್ಕಾದ ಹಾನಿಯ ತೀವ್ರತೆಯನ್ನು ನಿರ್ಲಕ್ಷಿಸಿ ಶಸ್ತ್ರಚಿಕಿತ್ಸೆ ಮಾಡದೆ ಗಾಯಕ್ಕಷ್ಟೇ ಸ್ಟಿಚ್ ಹಾಕಿ 16 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು.
ಆದರೆ ತಿಂಗಳು ಕಳೆದ ಮೇಲೆ ನೋವು ಕಡಿಮೆಯಾಗದೆ ಇದ್ದರೂ ವೈದ್ಯರು ಸರಿಯಾಗುತ್ತದೆ ಎಂದು ಅಂದಿದ್ದಾರೆ. ಕೊನೆಗೆ ಉಡುಪಿ ಸಮೀಪದ ಇನ್ನೊಂದು ದೊಡ್ಡ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ಮೊಣಕಾಲಿನ ಎಲುಬು ತುಂಡಾಗಿರುವುದು ಗೊತ್ತಾಗಿದೆ. ಅಲ್ಲಿನ ವೈದ್ಯರು ಕೂಡಲೆ ಶಸ್ತ್ರಚಿಕಿತ್ಸೆ ನಡೆಸಿದರು. ಅದಾಗಿ ಆರೇಳು ತಿಂಗಳು ಔಷಧಿ ತೆಗೆದುಕೊಂಡರೂ ನೋವು ಕಡಿಮೆ ಆಗಲೇ ಇಲ್ಲ’ ನಂತರ ಮಂಗಳೂರು ಮೂಳೆ ತಜ್ಞರ ಮೂಲಕ ಕಾಲಿನ ನರಗಳಿಗೂ ತೀವ್ರ ಪೆಟ್ಟಾಗಿರುವುದು ತಿಳಿದುಬಂದಿದೆ. ಈ ಕಾರಣದಿಂದ ಚೈತ್ರಾ ಅವರ ಕಾಲಿನ ಮೂರು ಬೆರಳುಗಳು ಚಲನೆಯನ್ನು ನಿಲ್ಲಿಸಿದ್ದು, ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ 2.5 ಲಕ್ಷ ರು. ಖರ್ಚಾಗಲಿದೆ ಎಂದಿದ್ದಾರೆ.
ಇದೀಗ ಯುವತಿಯೊಬ್ಬರು ವೈದ್ಯರ ಲೋಪದಿಂದ ಅಂಗ ವೈಕಲ್ಯಕ್ಕೆ ಒಳಗಾಗಿ ಸೇನೆ ಸೇರುವ ಅವಕಾಶದಿಂದ ಶಾಶ್ವತವಾಗಿ ವಂಚಿತರಾಗಿದ್ದಾರೆ. ಮಾತ್ರವಲ್ಲದೆ, ಈಗ ಶಸ್ತ್ರಚಿಕಿತ್ಸೆಗೆ ಹಣವಿಲ್ಲದೆ ಕೂಲಿ ಕೆಲಸ ಮಾಡಿಕೊಂಡಿರುವ ಆಕೆಯ ತಂದೆ- ತಾಯಿ ಕೈಚೆಲ್ಲಿ ಕೂತಿದ್ದಾರೆ.
ಅಪಘಾತ ನಡೆದ ಕೂಡಲೆ ಗಾಯದ ತೀವ್ರತೆಯನ್ನು ಅಂದಾಜಿಸಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿರುತ್ತಿದ್ದರೆ ಗಾಯ ಇಷ್ಟು ಉಲ್ಭಣಿಸುತ್ತಿರಲಿಲ್ಲ. ಕೆಲವೇ ವಾರಗಳಲ್ಲಿ ಮರಳಿ ಆರೋಗ್ಯವಂತಳಾಗಬಹುದಿತ್ತು. ಆದರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಶಾಶ್ವತವಾಗಿ ಅಂಗವೈಕಲ್ಯ ಅನುಭವಿಸಬೇಕಾಗಿದೆ. ಇಂಥ ಕಷ್ಟಕ್ಕೆ ಯಾರನ್ನೂ ತಳ್ಳಬಾರದು ಎಂದು ಚೈತನ್ಯ ನೋವು ಹೇಳಿಕೊಂಡಿದ್ದಾರೆ.
ಚೈತ್ರಾ ಅವರ ತಂದೆ ತಾಯಿ ಇಬ್ಬರೂ ಕೂಲಿ ಕಾರ್ಮಿಕರು. ಈಗಾಗಲೇ ಶಸ್ತ್ರಚಿಕಿತ್ಸೆ, ಆಸ್ಪತ್ರೆ ವಾಸ, ಔಷಧಿಗಾಗಿ ಸಾಕಷ್ಟು ಖರ್ಚು ಮಾಡಿದ್ದಾರೆ. ಇದೀಗ ಮಂಗಳೂರು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಅಗತ್ಯವಾಗಿ ಬೇಕಾದ 2.5 ಲಕ್ಷ ರೂ ಹೊಂದಿಸಲಾಗದೆ ಕಂಗಾಲಾಗಿದ್ದಾರೆ. ದಾನಿಗಳು ಚೈತ್ರಾ ಅವರ ತಮ್ಮ (ದೂ. 7483909826) ಅವರನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: ಬಿಗ್ಬಾಸ್ ನಡೆಸಿಕೊಡಲು ಸುದೀಪ್ ಪಡೆಯೋ ಸಂಭಾವನೆ ಎಷ್ಟು?! ಬೇರೆ ಭಾಷೆಯ ನಟರಿಗೆ ಎಷ್ಟು ಸಿಗುತ್ತದೆ ?
